

ಕಲಬುರಗಿ: ಶರಣ ಹರಳಯ್ಯ ಮತ್ತು ಕಲ್ಯಾಣಮ್ಮನವರ ತೊಡೆಯ ಚರ್ಮದಿಂದ ಸಿದ್ಧಪಡಿಸಿದ್ದ ಚೆಮ್ಮಾವುಗಳಿರುವ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಅ.೧೧ರಂದು ಶ್ರೀ ಶಿವಶರಣ ಹರಳಯ್ಯನವರ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಚಮ್ಮಾವುಗೆಗಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾಂತಪ್ಪ ಸಂಗಾವಿ ತಿಳಿಸಿದರು.
ಬಸವಣ್ಣನವರು ಸ್ಪರ್ಷಿಸಿದ ವಸ್ತುಗಳಲ್ಲಿ ಇಂದಿಗೂ ಲಭ್ಯ ಇರುವ ಚಮ್ಮಾವುಗೆಗಳು ಐತಿಹಾಸಿಕವಾಗಿ ಬಿಜನಳ್ಳಿಯಲ್ಲಿ ಉಳಿದಿವೆ. ಸಾಮಾಜಿಕ ಸಮಾನತೆಗೆ ಶ್ರಮಿಸಿದ ಶರಣ ಹರಳಯ್ಯನವರ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅ.೧೧ರಂದು ಬೆಳಗ್ಗೆ ೧೧ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ, ಮಳಖೇಡದ ಸೈಯದ್ ಶಹಾ ಮುಸ್ತಫಾ ಖಾದ್ರಿ ಸಜ್ಜಾದೆ ನಶೀನ್ ರೋಜಾ ನೇತೃತ್ವ ವಹಿಸಲಿದ್ದಾರೆ. ಸಚಿವ ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದು, ಮಹಾಂತಪ್ಪ ಸಂಗಾವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಶಾಸಕ ಬಸವರಾಜ ಮತ್ತಿಮಡು, ಎಂಎಲ್‌ಸಿ ಜಗದೇವ ಗುತ್ತೇದಾರ್, ಗುವಿವಿ ಕುಲಪತಿ ಪ್ರೊ.ದಯಾನಂದ ಅಗಸರ, ಎಸಿ ರಭು ರೆಡ್ಡಿ, ತಹಸೀಲ್ದಾರ್ ಶ್ರೇಯಾಂಕ ಧನಶ್ರೀ ಸೇರಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಹರಳಯ್ಯ ಸಮಾಜದ ಜಿಲ್ಲಾಧ್ಯಕ್ಷ ಕಾಶೀರಾಯ ನಂದೂರಕರ್, ಸಿದ್ದಣ್ಣ ಬಾವಿಮನಿ, ಶ್ರೀಮಂತ ಜೇವರ್ಗಿ, ರಾಜೇಶ ಇತರರಿದ್ದರು.