ಹರಮಘಟ್ಟ ಅರಣ್ಯದಲ್ಲಿ 32 ನಾಡಬಾಂಬ್ ಪತ್ತೆ

Nadabomb
Published on

ನ್ಯಾಮತಿ: ತಾಲೂಕಿನ ಫಲವನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ವೇ ನಂಬರ್ 61ರ ಹರಮಘಟ್ಟ ರಾಜ್ಯ ಮೀಸಲು ಅರಣ್ಯ ಪ್ರದೇಶದಲ್ಲಿ ನಾಲ್ವರು ದುಷ್ಕರ್ಮಿಗಳು, ಕಾಡು ಪ್ರಾಣಿಗಳ ಬೇಟೆಗೆಂದು ತಂದಿದ್ದ 32 ನಾಡಬಾಂಬ್ (ಮದ್ದು) ಮಂಗಳವಾರ ಪತ್ತೆಯಾಗಿವೆ.

ಇದರ ಜತೆಗೆ ಕೃತ್ಯಕ್ಕೆ ಬಳಸಿದ್ದ 2 ಬೈಕ್‌ಗಳನ್ನು ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ನ್ಯಾಮತಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಮೀಸಲು ಅರಣ್ಯ ಪ್ರದೇಶ ಅಕ್ರಮ ಪ್ರವೇಶ, ಕಾಡು ಪ್ರಾಣಿ ಬೇಟೆ ಅಡಿಯಲ್ಲಿ ಇಲಾಖೆ ಅಧಿಕಾರಿಗಳು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಪ್ರವೇಶ: ದುಷ್ಕರ್ಮಿಗಳು ಅಕ್ರಮ ಪ್ರವೇಶದ ವೇಳೆ ಅರಣ್ಯಾಧಿಕಾರಿಗಳನ್ನು ಕಂಡು ಕಾಲ್ಕಿತ್ತಿದ್ದಾರೆ. ಈ ವೇಳೆ ಆರೋಪಿಗಳಾದ ಮಾದಾಪುರ ಗ್ರಾಮದ ತಿಮ್ಮಪ್ಪ, ಗುಡ್ಡಪ್ಪ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರಿದಿದೆ. ಈ ಹಿಂದೆಯೂ ಇದೇ ಸರ್ವೇ ನಂಬರ್‌ನಲ್ಲಿ ನಾಡಬಾಂಬ್ ಇಡಲಾಗಿತ್ತು ಎಂಬುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಬರ್ಕತ್‌ಅಲಿ, ಗಸ್ತು ಅರಣ್ಯ ಪಾಲಕ ಎಚ್.ಬಿ.ಅಂಜಲಿ, ಕ್ಷೇಮಾಭಿವೃದ್ಧಿ ಅರಣ್ಯ ವೀಕ್ಷಕ ಎಂ.ಪಿ.ಬಸವರಾಜಪ್ಪ, ನೆಡುತೋಪು ಕಾವಲುಗಾರ ಸುನೀಲ, ಪ್ರವೀಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net