ಹರದನಹಳ್ಳಿ ಗ್ರಾಮದಲ್ಲಿ ಅದ್ಧೂರಿ ಚಂದ್ರಮಂಡಲೋತ್ಸವ

14rajesh2
Published on

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಹೋಬಳಿಯ ಬಂಡಿಗೆರೆ ಗ್ರಾಮದ ಶ್ರೀಸಿದ್ದಪ್ಪಾಜಿ ದೇವಾಲಯದಲ್ಲಿ ಹುಣ್ಣಿಮೆಯ ಚಂದ್ರಮಂಡಲೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ತಾಲೂಕಿನ ಚಿಕ್ಕಲ್ಲೂರು ದೇವಸ್ಥಾನದಲ್ಲಿ ನಡೆಯುವ ಚಂದ್ರಮಂಡಲೋತ್ಸವದ ದಿನದಂದೇ ಕಳೆದ ಎರಡು ವರ್ಷಗಳಿಂದ ಬಂಡಿಗೆರೆ ಗ್ರಾಮದಲ್ಲಿ ಚಂದ್ರಮಂಡಲೋತ್ಸವ ಆಚರಣೆ ಮಾಡಲಾಗುತ್ತದೆ. ಅದರಂತೆಯೇ ಸೋಮವಾರ ರಾತ್ರಿ ದೇವಾಲಯದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಚೆನ್ನಾಜಮ್ಮ ದೇವರುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬಂಡಿಗೆರೆ ಗ್ರಾಮದ ಸಮೀಪದಲ್ಲಿರುವ ಶ್ರೀಗೋಮುಖ ಕ್ಷೇತ್ರದಿಂದ ಪ್ರಾರಂಭವಾದ ಮೆರವಣಿಗೆ ಉತ್ಸವ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಸಿದ್ಪಪ್ಪಾಜಿ ದೇವಾಲಯದ ಸುತ್ತ ಮಂಗಳವಾದ್ಯ, ತಮಟೆ ಮೇಳಗಳೊಂದಿಗೆ ಸತ್ತಿ, ಸೂರಿಪಾನಿಗಳೊಂದಿಗೆ ಕಂಡಾಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂಭಾಗ ಬಿದಿರಿನಿಂದ ಚಂದ್ರಾಕಾರದಲ್ಲಿ ಕಟ್ಟಿದ ಮಂಡಲಕ್ಕೆ, ಹೊಂಬಾಳೆ, ಹೂಗಳಿಂದ ಶೃಂಗರಿಸಲಾಗಿತ್ತು.

ನಂತರ ಸಿದ್ದಪ್ಪಾಜಿ, ಮಂಟೇಸ್ವಾಮಿ, ದೊಡ್ಡಮ್ಮತಾಯಿ, ರಾಚಪ್ಪಾಜಿ, ಚೆನ್ನಾಜಮ್ಮ ಅವರ ಜಯ ಘೋಷದೊಂದಿಗೆ ಪೂಜೆ ಸಲ್ಲಿಸಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

ತಾಲೂಕಿನ ಹರದನಹಳ್ಳಿ, ಬಂಡಿಗೆರೆ ಸೇರಿದಂತೆ ಸುತ್ತಮುತ್ತಲಿನ ಊರುಗಳ ನೂರಾರು ಜನರು ಚಂದ್ರಮಂಡಲೋತ್ಸವಕ್ಕೆ ಸಾಕ್ಷಿಯಾದರು. ನೂರಾರು ಭಕ್ತರು ಸಿದ್ದಪ್ಪಾಜಿ ದರ್ಶನಪಡೆದು ವಿವಿಧ ಸೇವೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net