

ಚಾಮರಾಜನಗರ: ಮುಖ್ಯರಸ್ತೆಗೆ ಚಾಚಿಕೊಂಡಿರುವ ಮುಳ್ಳಿನ ಗಿಡಗಳು, ನಿರಂತರ ಮಳೆಯಿಂದಾಗಿ ಗುಂಡಿಮಯವಾಗಿರುವ ರಸ್ತೆಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸುವುದೇ ದುಸ್ಥರವಾಗಿದೆ.
ತಾಲೂಕಿನ ಹರದನಹಳ್ಳಿ ಗ್ರಾಮದಿಂದ ಅಮಚವಾಡಿ, ಅರಕಲವಾಡಿ, ಯಾನಗಳ್ಳಿ ಹಾಗೂ ಇನ್ನಿತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯುದ್ಧಕ್ಕೂ ಮುಳ್ಳಿನ ಗಿಡಗಳು ಹಾಗೂ ಇನ್ನಿತರೆ ಮರದ ಕೊಂಬೆಗಳು ರಸ್ತೆಗೆ ಚಾಚಿಕೊಂಡು ವಾಹನ ಸವಾರರಿಗೆ ನಿರಂತರವಾಗಿ ಸಮಸ್ಯೆಯಾಗುತ್ತಿದೆ. ಈ ಮಾರ್ಗವಾಗಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಹಲವಾರು ಶಾಲಾ ವಾಹನಗಳು ಹಾಗೂ ಕೂಲಿ ಕೆಲಸಗಳಿಗೆ ಕಾರ್ಮಿಕರನ್ನು ತುಂಬಿಕೊಂಡು ಹೋಗುವ ವಾಹನಗಳು ಸಂಚಾರ ಮಾಡುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡ-ಬಳ್ಳಿಗಳು ಆವರಿಸಿಕೊಂಡು ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ರಸ್ತೆಯ ಕೆಲವು ತಿರುವುಗಳಲ್ಲಿ ವಾಹನಗಳು ಕಾಣಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಈ ಭಾಗದಲ್ಲಿ ಹಲವಾರು ಅಪಘಾತಗಳು ಸಂಭವಿಸಿದ್ದು, ಸಾಕಷ್ಟು ಜನರಿಗೆ ಸಣ್ಣ-ಪುಟ್ಟ ಗಾಯಗಳು ಆಗಿದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ದೊಡ್ಡ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆಗೆ ಚಾಚಿಕೊಂಡಿರುವ ಮುಳ್ಳುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುಂಡಿ ಬಿದ್ದಿರುವ ರಸ್ತೆಗಳು:
ತಾಲೂಕಿನ ಛತ್ರಹೊಸೂರು ಗ್ರಾಮದಿಂದ ಅಮಚವಾಡಿ ಮಾರ್ಗದ ರಸ್ತೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾರಿಗಾತ್ರದ ಗುಂಡಿಗಳು ಬಿದ್ದಿದ್ದು, ಸಂಚಾರ ದುಸ್ತರವಾಗಿದೆ. ಇತ್ತೀಚೆಗೆ ಸುರಿಯುತ್ತಿರುವ ಭಾರಿಮಳೆಗೆ ಭಾರಿಗಾತ್ರದ ಗುಂಡಿಗಳು ಬಿದ್ದು, ರಸ್ತೆ ಕೆಸರುಮಯವಾಗಿದೆ. ಈ ರಸ್ತೆಯಲ್ಲೂ ನೂರಾರು ವಾಹನಗಳು ಹಾಗೂ ಶಾಲಾವಾಹನಗಳು ಸಂಚಾರ ಮಾಡುತ್ತಿದ್ದು, ನಿತ್ಯವೂ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.