

ನರಸಾಪುರ: ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರೆ ಗ್ರಾಮದ ಸತ್ಯಾಂಬಿಕೆ ಮತ್ತು ವೇದಾಂಬಿಕೆ ದೇವಾಲಯಕ್ಕೆ ಚಿನ್ನದ ನೆಕ್ಲೇಸ್, ಬೆಳ್ಳಿ ಕಾಸಿನ ಸರ ಮಾಡಿಕೊಡುವುದಾಗಿ ಹರಿಕೆ ಹೊತ್ತುಕೊಂಡಿದ್ದ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಶುಕ್ರವಾರ ಹರಕೆ ತೀರಿಸಿದರು.
ಎರಡೂ ದೇವಾಲಯಗಳಿಗೆ ಶುಕ್ರವಾರ ಭೇಟಿ ಕೊಟ್ಟು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಸುಮಾರು 3 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಅರ್ಚಕರ ಮೂಲಕ ದೇವಾಲಯಕ್ಕೆ ಅರ್ಪಿಸಿದರು.
ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಈ ದೇವಾಲಯಗಳಿಗೆ ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿರಾಜೇಶ್ವರಿ ಅವರ ಆಹ್ವಾನದ ಮೇರೆಗೆ ಬಂದಿದ್ದಾಗ, ಚಿಂತಾಮಣಿಯಲ್ಲಿ ಮತ್ತೊಮ್ಮೆ ಶಾಸಕರಾದರೆ ಈ ದೇವತೆಗಳಿಗೆ ಆಭರಣ ಅರ್ಪಿಸುವುದಾಗಿ ಹರಕೆ ಹೊತ್ತಿದ್ದು, ಇಂದು ಅರ್ಪಿಸಿದ್ದಾಗಿ ಹೇಳಿದರು.
ಮನುಷ್ಯ ನಿತ್ಯ ಜಂಜಾಟದಲ್ಲಿ ನೆಮ್ಮದಿ ಕಳೆದುಕೊಂಡಿರುತ್ತಾನೆ. ವಾರಕ್ಕೊಮ್ಮೆಯಾದರೂ ದೇವಾಲಯಗಳಿಗೆ ಹೋಗಿ ಕೈ ಮುಗಿದು ಒಂದಷ್ಟು ಸಮಯ ಕಳೆದರೆ ನೆಮ್ಮದಿ ಪಡೆಯಬಹುದು. ಪೂರ್ವಿಕರು ಪ್ರತಿ ಗ್ರಾಮದಲ್ಲೂ ದೇವಾಲಯಗಳನ್ನು ನಿಮಾರ್ಣ ಮಾಡುತ್ತಿದ್ದರು. ಅಲ್ಲದೆ ಯಾವುದೇ ಹಬ್ಬ-ಹರಿದಿನಗಳಲ್ಲಿ ಗ್ರಾಮಸ್ಥರು ಒಂದು ಕಡೆ ಸೇರಿ ಸಂಭ್ರಮಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ದೇವಾಲಯಗಳ ಕಡೆ ಹೋಗುವುದನ್ನೇ ಮರೆತಿದ್ದಾರೆ. ಕೇವಲ ಪಬ್, -ಸಿನಿಮಾ, ಮೊಬೈಲ್ಗಳಲ್ಲೇ ಜೀವನವನ್ನು ಕಳೆಯುತ್ತಿದ್ದಾರೆ ಎಂದರು.
ಸಂಪಾದನೆಯಲ್ಲಿ ಒಂದಷ್ಟು ಭಾಗ ದಾನ-ಧರ್ಮ ಮಾಡಬೇಕು. ದೇವಾಲಯಗಳ ನಿಮಾರ್ಣಕ್ಕೆ ಸಹಕಾರ ನೀಡಬೇಕು. ಆಗ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ನಾನು ರಾಜಕೀಯ ಜೀವನಕ್ಕೆ ಬರುವುದಕ್ಕೂ ಮುಂಚಿನಿಂದ ನನ್ನ ಕೈಲಾದ ಮಟ್ಟಿಗೆ ದೇವಾಲಯಗಳ ಅಭವೃದ್ಧಿಗೆ ಸಹಕಾರ ಕೊಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ, ಬಣಕನಹಳ್ಳಿ ನಟರಾಜ್, ಸಿಎಂಆರ್ ಶ್ರೀನಾಥ್, ಜನಪ್ಪನಹಳ್ಳಿ ಆನಂದ್, ದಿಂಬ ನಾಗರಾಜ್, ಪೆರ್ಜೇನಹಳ್ಳಿ ನಾಗರಾಜ್, ಮಲ್ಲಸಂದ್ರ ದೇವರಾಜ್, ಸೂಲೂರು ನಂಜುಂಡಿ, ನರಸಾಪುರ ಪ್ರಭು, ಕಿರಣ್, ಅಮರ್, ವೇಮಗಲ್ ಭುವನೇಶ್, ಲಕ್ಷಿ$್ಮಸಾಗರ ಸುನೀಲ್, ಕುರ್ಕಿ
ಶ್ರೀಧರ್, ಶ್ರೀಕಾಂತ್ ಮತ್ತಿತರರಿದ್ದರು.