

ಬೀದರ್: ಡಾ.ಶೈಲೇಂದ್ರ ಬೆಲ್ದಾಳೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುವಂತೆ ಹರಕೆ ಹೊತ್ತಿದ್ದ ಅಭಿಮಾನಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಗನ್ನಾಥ ಪಾಟೀಲ್ ನೇತೃತ್ವದಲ್ಲಿ ತುಳಜಾಪುರ ಭವಾನಿ ಮಂದಿರವರೆಗೆ ಕಾಲ್ನಡಿಗೆಯಲ್ಲಿ ಹೋಗಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.
ಬೆಲ್ದಾಳೆ ಬಿಜೆಪಿ ಟಿಕೆಟ್ ಪಡೆದು ದಕ್ಷಿಣ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಲಿ ಎಂದು ಪಾಟೀಲ್ ನೇತೃತ್ವದಲ್ಲಿ ಹಲವರು ಮಹಾರಾಷ್ಟ್ರದ ಸುಕ್ಷೇತ್ರ ತುಳಜಾಪುರದ ಭವಾನಿ ಮಾತೆಯಲ್ಲಿ ಹರಕೆ ಹೊತ್ತಿದ್ದರು. ಅದರಂತೆ ಮಂಗಳವಾರ ಸಿರಕಟನಳ್ಳಿಯಿಂದ ಪಾದಯಾತ್ರೆ ಆರಂಭಿಸಿ ಹುಮನಾಬಾದ್, ಸಸ್ತಾಪುರ ಬಗ್ಲಾ, ಉಮರ್ಗಾ, ಜಳಕೋಟ, ನಳದುರ್ಗ ಮಾರ್ಗವಾಗಿ ಶುಕ್ರವಾರ ತುಳಜಾಪುರ ತಲುಪಿದ್ದಾರೆ.
ಶಾಸಕ ಬೆಲ್ದಾಳೆ ಸಹ ಶುಕ್ರವಾರ ತುಳಜಾಪುರಕ್ಕೆ ತೆರಳಿ ಅಭಿಮಾನಿಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಎರಡು ಚುನಾವಣೆಯಲ್ಲಿ ಬೆಲ್ದಾಳೆ ಸೋತರೂ ಕ್ಷೇತ್ರದ ಜನರೊಂದಿಗೆ ಇದ್ದು, ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದರು. ಈ ಬಾರಿ ಅವರನ್ನು ಶಾಸಕರಾಗಿ ಆಯ್ಕೆಯಾಗುವಂತೆ ತಾಯಿ ಭವಾನಿಯಲ್ಲಿ ಹರಕೆ ಹೊತ್ತಿದ್ದೆವು. ನಮ್ಮ ಹರಕೆಯಂತೆ ಬೆಲ್ದಾಳೆ ಶಾಸಕರಾಗಿದ್ದಾರೆ. ಹೀಗಾಗಿ ಪಾದಯಾತ್ರೆ ನಡೆಸಿ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಲಾಗಿದೆ ಎಂದು ಜಗನ್ನಾಥ ಪಾಟೀಲ್ ತಿಳಿಸಿದ್ದಾರೆ.