

ಮುಂಡರಗಿ: ತಾಲೂಕಿನ ಹಮ್ಮಿಗಿ ಗ್ರಾಮದ ಸಮೀಪದ ಸಿಂಗಟಾಲೂರ ಬ್ಯಾರೇಜ್ ಬಳಿ ರಸ್ತೆಯಲ್ಲಿ ಶನಿವಾರ ರಾತ್ರಿ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮುಂಡರಗಿ ತಾಲೂಕಿನ ಹಮ್ಮಿಗಿ ಹಾಗೂ ಹೂವಿನಹಡಗಲಿ ತಾಲೂಕಿನ ರಾಜವಾಳ ಗ್ರಾಮದ ಮಧ್ಯ ಭಾಗದಲ್ಲಿ ಹರಿಯುವ ತುಂಗಭದ್ರಾನದಿಗೆ ಅಡ್ಡಲಾಗಿ ನಿರ್ವಿುಸಿರುವ ಸಿಂಗಟಾಲೂರ ಬ್ಯಾರೇಜ್ ಹಿನ್ನೀರಿನಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದೆ. ಸಿಂಗಟಾಲೂರ ಏತ ನೀರಾವರಿ ಯೋಜನೆ ಮುಖ್ಯಕಾಲುವೆ ಮೂಲಕ ಬ್ಯಾರೇಜ್ಗೆ ತೆರಳುವ ರಸ್ತೆಯಲ್ಲಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಮೊಸಳೆ ಪ್ರತ್ಯಕ್ಷವಾಗಿದ್ದನ್ನು ಸ್ಥಳೀಯರು ನೋಡಿ, ತಮ್ಮ ಮೊಬೈಲ್ಫೋನ್ ಸಹಾಯದಿಂದ ವಿಡಿಯೋ ಸೆರೆ ಹಿಡಿದ್ದಾರೆ.
ಬ್ಯಾರೇಜ್ ಸುತ್ತಲಿನ ಗ್ರಾಮಗಳ ಜನ-ಜಾನುವಾರುಗಳು ನದಿ ತೀರಕ್ಕೆ ತೆರಳಲು ಆತಂಕ ಪಡುವಂತಾಗಿದೆ. ಅಲ್ಲದೆ, ಬ್ಯಾರೇಜ್ ಭಾಗದಲ್ಲಿ ಅನೇಕ ಸುಪ್ರಸಿದ್ಧ ದೇವಸ್ಥಾನಗಳಿದ್ದು, ದೇವರ ದರ್ಶನಕ್ಕೆ ಬರು-ಹೋಗುವ ಭಕ್ತರಲ್ಲೂ ಇದೀಗ ಭಯ ಆವರಿಸಿದೆ.
ಶನಿವಾರ ರಾತ್ರಿ ಬ್ಯಾರೇಜ್ಗೆ ತೆರಳುವ ರಸ್ತೆಯ ಮೇಲೆ ದೊಡ್ಡ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು. ಸುಮಾರು ಅರ್ಧ ಗಂಟೆ ನಂತರ ಮೊಸಳೆ ಪುನಃ ನದಿಯಲ್ಲಿ ಹೋಯಿತು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಗೆಯೇ ಗ್ರಾಮದ ಮಜ್ಜರ ಗುಡಿ ಬಳಿಯಲ್ಲಿನ ಹೊಂಡದಲ್ಲಿ ಒಂದು ಮೊಸಳೆ ಇದೆ. ಇದರಿಂದಾಗಿ ಗ್ರಾಮದ ಜನರಿಗೆ ಭಯವಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮಕ್ಕೆ ಮುಂದಾಗಬೇಕು.| ರವಿಚಂದ್ರ ಬಂಡಿವಡ್ಡರ ಗ್ರಾಪಂ ಸದಸ್ಯ ಹಮ್ಮಿಗಿ
ಸಿಂಗಟಾಲೂರ ಬ್ಯಾರೇಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಶನಿವಾರ ರಾತ್ರಿ ತಡವಾಗಿ ಮಾಹಿತಿ ತಿಳಿಯಿತು. ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮೊಸಳೆ ನದಿಗೆ ಹೋಗಿದೆ. ಮತ್ತೆ ಮೊಸಳೆ ಕಂಡು ಬಂದರೆ ಸಾರ್ವಜನಿಕರು ಯಾವುದೆ ಸಮಯದಲ್ಲಿ ಫೋನ್ ಕರೆ ಮಾಡಿದರೂ ಸ್ಥಳಕ್ಕೆ ಭೇಟಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು.| ಪ್ರದೀಪ ಪವಾರ ಆರ್ಎಫ್ಒ ಮುಂಡರಗಿ