

ಕೆ.ಆರ್.ನಗರ: ಸ್ವಾತಂತ್ರ್ಯ ದಿನವನ್ನು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹಬ್ಬದಂತೆ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೆ.ಆರ್.ನಗರ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನವನ್ನು ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಗೌರವಪೂರ್ವಕವಾಗಿ, ಅದ್ದೂರಿಯಾಗಿ ಆಚರಣೆ ಮಾಡೋಣ ಎಂದು ಹೇಳಿದರು.
ಅಂದಿನ ಕಾರ್ಯಕ್ರಮಕ್ಕೆ ನಿಗದಿತ ಅವಧಿ ಒಳಗೆ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪ್ರಿಯ ಯೋಜನೆಗಳಾದ ಶಕ್ತಿ ಯೋಜನೆಯ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗೃಹಜ್ಯೋತಿ ಯೋಜನೆ ಬಗ್ಗೆ ಸೆಸ್ಕ್ ಇಲಾಖೆಯಿಂದ ಸ್ತಬ್ಧಚಿತ್ರಗಳನ್ನು ಮಾಡುವ ಮೂಲಕ ಸರ್ಕಾರದ ಈ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಬೇಕು. ಇತರ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳ ಬಗ್ಗೆ ಸ್ತಬ್ಧಚಿತ್ರಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಅಂದು ಬೆಳಗ್ಗೆ 7.30ಕ್ಕೆ ಎಲ್ಲರೂ ಜೂನಿಯರ್ ಕಾಲೇಜು ಮೈದಾನದಲ್ಲಿ ಹಾಜರಿರಬೇಕು. ಮೆರವಣಿಗೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ನೀಡಿ 8ಗಂಟೆಗೆ ಮೆರವಣಿಗೆ ಪ್ರಾರಂಭಿಸಿ 10 ಗಂಟೆಯೊಳಗೆ ಬಯಲು ರಂಗಮಂದಿರದಲ್ಲಿ ಧ್ವಜಾರೋಹಣವನ್ನು ನೆರವೇರಿಸಬೇಕು ಎಂದು ಸೂಚಿಸಿದರು.
ಪೂರ್ವಭಾವಿ ಸಭೆಗೆ ಹಾಜರಾಗದ ಪೊಲೀಸ್ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಇತರ ಅಧಿಕಾರಿಗಳಿಗೆ ತಹಸೀಲ್ದಾರ್ ಅವರು ತಿಳಿವಳಿಕೆ ಪತ್ರ ನೀಡಬೇಕು ಹಾಗೂ ಗೈರು ಸಂಬಂಧ ಕಾರಣ ಕೇಳಿ ನೋಟಿಸ್ ನೀಡಬೇಕೆಂದು ಸೂಚಿಸಿದರು.
ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ವಿವಿಧ ಇಲಾಖೆಗಳಿಗೆ ವಹಿಸಿರುವ ಜವಾಬ್ದಾರಿಯನ್ನು ತಪ್ಪದೆ ನಿರ್ವಹಿಸಬೇಕು. ಪುರಸಭೆ ವತಿಯಿಂದ ಪಟ್ಟಣದ ಎರಡು ವೃತ್ತಗಳಿಗೆ ವಿದ್ಯುದ್ದೀಪಾಲಂಕಾರ ಮಾಡಬೇಕು. ಅಂಗಡಿ, ಮುಂಗಟ್ಟುಗಳ ವರ್ತಕರು ದೀಪಾಲಂಕಾರ ಮಾಡುವಂತೆ ಅಧಿಕಾರಿಗಳು ಮನವರಿಕೆ ಮಾಡಬೇಕು. ಎಲ್ಲ ಇಲಾಖೆಯವರು ತಮ್ಮ ಇಲಾಖೆ ಕಚೇರಿಗಳನ್ನು ಅಲಂಕರಿಸುವಂತೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಎಚ್.ಕೆ.ಸತೀಶ್, ಪುರಸಭಾ ಮುಖ್ಯಾಧಿಕಾರಿ ಸುಧಾರಾಣಿ, ಬಿಸಿಎಂ ಅಧಿಕಾರಿ ಚಂದ್ರಕಲಾ, ಲೋಕೋಪಯೋಗಿ ಇಲಾಖೆ ಎಇಇ ಎಸ್.ವಿ.ಸುಮಿತಾ, ಪಶುಸಂಗೋಪನಾ ಇಲಾಖೆ ವೈದ್ಯಾಧಿಕಾರಿ ಮಂಜುನಾಥ, ಆರ್‌ಎಫ್‌ಒ ರಶ್ಮಿ, ಹಾರಂಗಿ ಉಪವಿಭಾಗದ ಎಇಇ ಬಿ.ಜೆ.ಗುರುರಾಜ್, ಎಸ್.ಎಂ.ಅಶೋಕ್‌ಕುಮಾರ್, ಸೆಸ್ಕ್ ಎಇಇ ಅರ್ಕೇಶ್‌ಮೂರ್ತಿ, ಇಸಿಒ ದಾಸಪ್ಪ ಇತರರು ಹಾಜರಿದ್ದರು.