ಹಬ್ಬದ ಸಂಭ್ರಮ, ಮೈ ಮರೆತ ಜನ

ಹಬ್ಬದ ಸಂಭ್ರಮ, ಮೈ ಮರೆತ ಜನ
Published on

ಹೀರಾನಾಯ್ಕ ಟಿ.
ವಿಜಯಪುರ: ಎಲ್ಲೆಲ್ಲೂ ಹಬ್ಬದ ಸಂಭ್ರಮ. ಕರೊನಾ ಮಹಾಮಾರಿಯಿಂದಾಗಿ ಜನರು ಮೈ ಮರೆತಿದ್ದಾರೆ. ದಸರಾ ಹಬ್ಬದ ಸಂಭ್ರಮದಲ್ಲಿರುವ ಜನರು ಪರಸ್ಪರ ಅಂತರ ಕಾಯ್ದುಕೊಳ್ಳದೆ ಇರುವುದರಿಂದ ಕೋವಿಡ್ ಸೋಂಕು ಇನ್ನಷ್ಟು ಹರಡುವ ಸಾಧ್ಯತೆ ದಟ್ಟವಾಗಿದೆ.
ಕೇಂದ್ರ ಬಸ್ ನಿಲ್ದಾಣ, ಮಾರುಕಟ್ಟೆ, ಅಂಚೆ ಕಚೇರಿ, ಬ್ಯಾಂಕ್, ಎಟಿಎಂ ಕೇಂದ್ರ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿನಿತ್ಯ ಸಾವಿರಾರು ಜನರು ಸೇರುತ್ತಾರೆ. ಇಂತಹ ಕಡೆಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರೇ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ.

ಕ್ಯಾರೇ ಎನ್ನದ ಗ್ರಾಮೀಣ ಜನ
ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೊಸ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸುತ್ತಿದೆ. ಆದರೆ ಜನರು ಮಾತ್ರ ಸರ್ಕಾರದ ಯಾವುದೇ ಆದೇಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜನರು ಮಾಸ್ಕ್ ಧರಿಸುವುದು ಅತಿ ಕಡಿಮೆಯಾಗಿದೆ. ಇನ್ನು ನಗರ ಪ್ರದೇಶದಲ್ಲಿಯೂ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮಾಯವಾಗಿದೆ. ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿ ತಾಲೂಕು, ಬೇರೆ ಜಿಲ್ಲೆಗಳಿಗೆ ಪ್ರಯಾಣಿಸುವ ಜನರು ಮಾಸ್ಕ್ ಧರಿಸುವುದನ್ನು ಮರೆತಿದ್ದಾರೆ.

ಸಂತೆಗಳಲ್ಲಿ ಕರೊನಾದ್ದೇ ಚಿಂತೆ
ದಸರಾ ಹಬ್ಬದ ಸಂಭ್ರಮದಲ್ಲಿರುವ ಜನರು, ತರಕಾರಿ, ದಿನಸಿ ಖರೀದಿಸಲು ಸಂತೆಗೆ ಬರುವುದು ಹೆಚ್ಚು. ಇದರಿಂದ ಗ್ರಾಮೀಣ ಭಾಗದಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಪರಸ್ಪರ ಅಂತರ ಎನ್ನುವುದೇ ಇಲ್ಲ. ಗ್ರಾಹಕರಿಗೆ ಚಿಂತೆ ಶುರುವಾಗಿದೆ. ನಾಲತವಾಡ, ಮನಗೂಳಿ, ಕೊಲ್ಹಾರದಲ್ಲಿ ನಡೆಯುವ ವಾರದ ಸಂತೆಗಳಲ್ಲಿ ಪರಸ್ಪರ ಅಂತರ ಮರೀಚಿಕೆ ಆಗಿದೆ. ವಿಜಯಪುರ ನಗರದ ವಿವಿಧ ಬಡಾವಣೆಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ನಡೆಯುವ ಸಂತೆಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಸವಾಲಾಗಿದೆ.

ಪಾಲಿಕೆಯಿಂದ ಜಾಗೃತಿ
ವಿಜಯಪುರ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಂತೆ ಪಾಲಿಕೆ ವತಿಯಿಂದ ಜಾಗೃತಿ ವಹಿಸಲಾಗಿದೆ. ಕರೊನಾ ಪಾಸಿಟಿವ್ ಕಂಡು ಬಂದ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡುವುದು, ವಿವಿಧ ಬಡಾವಣೆಗಳಲ್ಲಿ ಔಷಧ ಸಿಂಪಡಣೆ, ಪಾಸಿಟಿವ್ ಪ್ರಕರಣ ಕಂಡುಬಂದ ಪ್ರದೇಶದಲ್ಲಿ ಪ್ರತ್ಯೇಕವಾಗಿ ಕಸ ಸಂಗ್ರಹ, ಅದಕ್ಕಾಗಿ ಪ್ರತ್ಯೇಕ ವಾಹನ, ಸಿಬ್ಬಂದಿ ನಿಯೋಜಿಸಲಾಗಿದೆ.

7.14 ಲಕ್ಷ ರೂ. ದಂಡ ವಸೂಲಿ
ಜಿಲ್ಲೆಯಲ್ಲಿ ಕರೊನಾ ಮಹಾಮಾರಿ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಮಾಸ್ಕ್ ಧರಿಸದವರಿಂದ ಈವರೆಗೆ 7,14,500 ರೂ.ದಂಡ ವಸೂಲಿ ಮಾಡಲಾಗಿದೆ.
ಕಳೆದ ಅ.1ರಿಂದ 7ರ ವರೆಗೆ ನಗರಪ್ರದೇಶದಲ್ಲಿ 1000 ರೂ.ನಂತೆ ಹಾಗೂ ಗ್ರಾಮೀಣ ಭಾಗದಲ್ಲಿ 500 ರೂ.ನಂತೆ ದಂಡ ವಿಧಿಸಲಾಗಿದೆ. ಈ ವೇಳೆ 3,94,200 ರೂ. ದಂಡ ಸಂಗ್ರಹಿಸಲಾಗಿದ್ದು, 1,195 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅ.8ರ ನಂತರ ಸರ್ಕಾರ ಆದೇಶದನ್ವಯ ದಂಡದ ಪ್ರಮಾಣ ಇಳಿಕೆ ಆಗಿದ್ದು, ನಗರ ಪ್ರದೇಶದಲ್ಲಿ 250 ರೂ. ಗ್ರಾಮೀಣ ಪ್ರದೇಶದಲ್ಲಿ 100 ರೂ.ನಂತೆ ಒಟ್ಟು 3288 ಪ್ರಕರಣಗಳನ್ನು ದಾಖಲಿಸಲಾಗಿದ್ದು, 3,20,300 ರೂ. ವಸೂಲಿ ಮಾಡಲಾಗಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 208 ಪ್ರಕರಣ ದಾಖಲಾಗಿದ್ದು, 1,17,850 ರೂ. ಸಂಗ್ರಹಿಸಲಾಗಿದೆ. ಪೊಲೀಸ್ ಇಲಾಖೆ ವ್ಯಾಪ್ತಿ 2,268 ಪ್ರಕರಣ ದಾಖಲಾಗಿದ್ದು,3,72,600 ರೂ., ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿ 812 ಪ್ರಕರಣ ದಾಖಲಿಸಲಾಗಿದ್ದು, 2,24,050 ರೂ.ವಸೂಲಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net