

ಸರಗೂರು: ಗೌರಿ-ಗಣೇಶ ಹಾಗೂ ಬಕ್ರೀದ್ ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಬೇಕು. ದೇವರ ಹೆಸರಿನಲ್ಲಿ ಪೈಪೋಟಿ, ನಿಯಮಬಾಹಿರ ಧ್ವನಿವರ್ಧಕ ಅಳವಡಿಕೆ, ಇಸ್ಪೀಟ್, ಜೂಜಾಟ ಸೇರಿ ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಸನ್ನ ಕುಮಾರ್‌ಎಚ್ಚರಿಕೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ-ಗಣೇಶ ಹಾಗೂ ಬಕ್ರೀದ್ ಹಬ್ಬದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.
25 ಮತ್ತು 26 ರಂದು ನಡೆಯುವ ಗೌರಿ-ಗಣೇಶ ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಆಚರಿಸಬೇಕು. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಆಡಳಿತದಲ್ಲಿ, ಅಗ್ನಿಶಾಮಕ ಠಾಣೆ, ವಿದ್ಯುತ್ ಇಲಾಖೆ ಹಾಗೂ ಧ್ವನಿವರ್ಧಕ ಅಳವಡಿಸಲು ತಹಸೀಲ್ದಾರ್ ಅನುಮತಿ ಪಡೆದು ಪೊಲೀಸರು ನೀಡುವ ಸಲಹೆ ಸೂಚನೆ ಪಾಲಿಸಬೇಕು. ಅನುಮತಿ ನೀಡಲಾಗುವ ಸಮಯದಲ್ಲಿ ಗಣಪತಿ ವಿಸರ್ಜನೆ ಮಾಡಬೇಕು. ಗ್ರಾಮಗಳಲ್ಲಿ ಯಾವುದೇ ಸಂದರ್ಭದಲ್ಲಿ ಡಿಜೆ ಬಳಸಬಾರದು ಎಂದು ತಿಳಿಸಿದರು.
ಪಿಎಸ್‌ಐ ಆರ್. ಕಿರಣ್ ಮಾತನಾಡಿ, ಠಾಣಾ ವ್ಯಾಪ್ತಿಯಲ್ಲಿ ಬರುವ ಊರುಗಳಲ್ಲಿ ಗಣೇಶಮೂರ್ತಿ ಸ್ಥಾಪನೆಗೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ನಾಲ್ಕು ದಿನಗಳ ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು. ಅಂತಹ ಮೂರ್ತಿಗಳಿಗೆ ಮಾತ್ರ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಪೊಲೀಸ್ ಇಲಾಖೆ ಅನುಮತಿ ಪಡೆಯತಕ್ಕದ್ದು. ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ ಸೆಸ್ಕ್‌ನಿಂದ ಪರವಾನಗಿ ಪಡೆಯಬೇಕು. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ನಿಗದಿಪಡಿಸಿದ ದಿನದಂದು ಗಣೇಶ ವಿಸರ್ಜನೆ ಮಾಡಬೇಕು. ನಿಗದಿಪಡಿಸಿದ ರಸ್ತೆ ಮಾರ್ಗ ಬದಲಿಸಬಾರದು. ಖಾಸಗಿ ಬಾವಿಯಲ್ಲಿ ವಿಸರ್ಜನೆ ಮಾಡಬೇಕಾದರೆ, ಆ ಬಾವಿಯ ಮಾಲೀಕರ ಅನುಮತಿ ಪಡೆದಿರಬೇಕು. ಅಶ್ಲೀಲ ಹಾಡು, ನತ್ಯ ಕಾರ್ಯಕ್ರಮಗಳು ನಡೆದಲ್ಲಿ ಸಂಬಂಧಪಟ್ಟ ಸಂಘ-ಸಂಸ್ಥೆಯ ಪದಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಕ್ರೈಂ ಬ್ರಾಂಚ್ ಇನ್‌ಸ್ಪೆಕ್ಟರ್ ಗೋಪಾಲ್, ಪಪಂ ಸದಸ್ಯ ಶ್ರೀನಿವಾಸ, ಪೊಲೀಸ್ ಠಾಣೆಯ ಸಿಬ್ಬಂದಿ ಪುರುಷೋತ್ತಮ್, ಕೃಷ್ಣಕುಮಾರ್, ಶಿವಕುಮಾರ್, ನಾರಾಯಣ,ಇಮ್ರಾನ್, ಜಗದೀಶ್, ಕೃಷ್ಣಯ್ಯ, ಶಿವರಾಜು, ದೇವರಾಜು, ಶೋಭಾ, ಉಷಾ, ಮಹಾದೇವಮ್ಮ, ಸುನೀಲ್ ಇತರರಿದ್ದರು.