ಹಬ್ಬಗಳ ಆಚರಣೆಯಲ್ಲಿ ನಿಯಮ ಪಾಲಿಸಿ

SP
Published on

ಚಿತ್ರದುರ್ಗ: ಗಣೇಶೋತ್ಸವ, ಈದ್ ಮಿಲಾದ್ ಹಬ್ಬ ಆಚರಿಸುವ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಸೂಚಿಸಿದರು.

ಎರಡೂ ಹಬ್ಬಗಳ ಅಂಗವಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಲಾಖೆಯಿಂದ ಬುಧವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಕೋಟೆನಾಡಲ್ಲಿ ಕೋಮುವಾದ ಸಮಸ್ಯೆ ಇಲ್ಲ ಎಂಬ ವಿಚಾರ ಅತ್ಯಂತ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದುರ್ಗದ ಹಿಂದು ಮಹಾಗಣಪತಿ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದು, ಶೋಭಾಯಾತ್ರೆಗೆ ನಾಲ್ಕೈದು ಲಕ್ಷ ಜನ ಸೇರುತ್ತಾರೆ. ಸೌಹಾರ್ದತೆಯಿಂದ ಮಹೋತ್ಸವ ಆಚರಿಸುವ ಕಡಿಮೆ ಜಿಲ್ಲೆಗಳಲ್ಲಿ ಇದು ಕೂಡ ಒಂದು. ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯದೆಲ್ಲೆಡೆಯಿಂದ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಹಿಂದು ಮಹಾಗಣಪತಿ, ಪ್ರಸನ್ನ ಗಣಪತಿ, ಈದ್ ಮಿಲಾದ್ ಆಚರಣೆ ಬಹಳ ಶಾಂತಿಯುತವಾಗಿ ನಡೆಯಲಿವೆ ಎಂಬ ವಿಶ್ವಾಸವಿದೆ. ಚಿತ್ರದುರ್ಗದ ಗಣಪತಿ ಭಾವೈಕ್ಯತೆಯಿಂದ ಕೂಡಿದ್ದು, ದೇಶಕ್ಕೆ ಸಂದೇಶ ಸಾರುವ ನಿಟ್ಟಿನಲ್ಲಿ ಮಾದರಿಯಾಗಬೇಕು. ಯಾವುದೇ ರೀತಿಯ ಸಣ-ಪುಟ್ಟ ಘಟನೆಗಳೂ ನಡೆಯದಂತೆ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಮಾತನಾಡಿ, ಚಿತ್ರದುರ್ಗದಲ್ಲಿ ಸತತ 17 ವರ್ಷಗಳಿಂದ ಅದ್ಧೂರಿಯಾಗಿ ಗಣೇಶೋತ್ಸವವನ್ನು ಶ್ರದ್ಧಾ-ಭಕ್ತಿ, ನಿಷ್ಠೆಯಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಯಾವ ವರ್ಷವೂ ಅಹಿತಕರ ಘಟನೆ ನಡೆದಿಲ್ಲ. ಈ ಬಾರಿಯೂ ನಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೋಭಾಯಾತ್ರೆಗೆ ಮುಸ್ಲಿಂ ಸಮುದಾಯದವರು ಸಹಕಾರ ನೀಡಬೇಕು. ಕೋಟೆನಾಡು ಶಾಂತಿಯ ಬೀಡು. ಇಲ್ಲಿ ಸಹೋದರ-ಸಹೋದರಿಯರಂತೆ ಎಲ್ಲಾ ಧರ್ಮೀಯರು ಬಾಳುತ್ತಿದ್ದೇವೆ ಎಂದು ವಿಎಚ್‌ಪಿ ಮುಖಂಡ ಓಂಕಾರ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ ಹೇಳಿದರು.

ಹಿಂದು-ಮುಸ್ಲಿಂ ಧರ್ಮೀಯರ ಹಬ್ಬಗಳು ಎರಡು ಕಣ್ಣುಗಳಿದ್ದಂತೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದು, ಪರಸ್ಪರ ಸಹಕಾರ ನೀಡುತ್ತಾ ಬಂದಿದ್ದೇವೆ. ಗಣೇಶೋತ್ಸವ ಅತ್ಯಂತ ಪವಿತ್ರವಾದುದು. ಆದ್ದರಿಂದ ಶೋಭಾಯಾತ್ರೆಯಲ್ಲಿ ಯಾರೂ ಮದ್ಯ ಸೇವಿಸಬಾರದು, ಗುಟ್ಕಾ ಹಾಕಿಕೊಳ್ಳಬಾರದು ಎಂದು ಮುಖಂಡರಾದ ಎಂಸಿಒ ಬಾಬು, ಮಹಮದ್ ಅಹ್ಮದ್ ಪಾಷ, ಟಿಪ್ಪು ಖಾಸಿಂ ಆಲಿ ವಿನಂತಿಸಿದರು.

ಹಿರಿಯ ವಕೀಲ ಬಿ.ಕೆ.ರೆಹಮತ್‌ವುಲ್ಲಾ ಮಾತನಾಡಿ, ನಮ್ಮದು ಜಾತ್ಯಾತೀತ ರಾಷ್ಟ. ನಮ್ಮ ಧರ್ಮ ಎಷ್ಟು ಪ್ರೀತಿಸುತ್ತೇವೊ ಇತರೆ ಧರ್ಮಗಳಿಗೆ ಅಷ್ಟೇ ಗೌರವ ಕೊಡಬೇಕು. ನಾವೆಲ್ಲರೂ ಒಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕರುನಾಡ ವಿಜಯಸೇನೆ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಶೋಭಾಯಾತ್ರೆ ವೇಳೆ ಜಿಲ್ಲಾಡಳಿತ, ನಗರಸಭೆ ಅಥವಾ ಸಮಿತಿಯಿಂದ ಇ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು. ನಗರದಲ್ಲಿನ ಅವೈಜ್ಞಾನಿಕ ಸಿಗ್ನಲ್, ರಸ್ತೆ ಉಬ್ಬುಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಸೈಯದ್‌ವಲಿ ಖಾದ್ರಿ, ಪ್ರಸನ್ನ ಗಣಪತಿ ಸಮಿತಿಯ ರಾಜ್ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ, ಹಿರಿಯ ವಕೀಲ ಫಾತ್ಯರಾಜನ್, ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net