

ಮೈಸೂರು: ಮೈಸೂರು ದಸರಾವನ್ನು 9 ದಿನಗಳು ಮಾತ್ರವಲ್ಲದೇ, 11 ದಿನಗಳ ಕಾಲ ಆಚರಣೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಪ್ರತಿ ವರ್ಷ 9 ದಿನಗಳ ಕಾಲ ನಡೆಯುವ ದಸರಾ ಈ ಬಾರಿ 11 ದಿನಗಳ ಕಾಲ ನಡೆಯಲಿರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿ, ಮೈಸೂರು ದಸರಾವನ್ನು ಈ ಸಲ 11 ದಿನಗಳ ಕಾಲ ಆಚರಣೆ ಮಾಡುತ್ತಿರುವುದು ಹೊಸದಲ್ಲ.
ಈ ಹಿಂದೆಯೂ ಹಲವು ಬಾರಿ ಅರಮನೆಯ ಕ್ಯಾಲೆಂಡರ್ ಅನ್ವಯ ದಸರಾವನ್ನು 11 ದಿನಗಳ ಕಾಲ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ನಾಡಹಬ್ಬ ಹಾಗೂ ಅರಮನೆಯ ನವರಾತ್ರಿಗಳು ಸಾಂಪ್ರದಾಯಿಕವಾಗಿ ಈ ಹಿಂದಿನಂತೆಯೇ ನಡೆಯಲಿವೆ ಎಂದು ತಿಳಿಸಿದ್ದಾರೆ.
ದಸರಾ ಹಾಗೂ ಅರಮನೆಯ ಶರನ್ನವರಾತ್ರಿ ಪೂಜೆಗಳನ್ನು ಸುಮಾರು 400 ವರ್ಷಗಳಿಂದ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಕೆಲ ಮಾಧ್ಯಮಗಳಲ್ಲಿ ಮೊದಲ ಬಾರಿಗೆ 11 ದಿನಗಳ ಕಾಲ ದಸರಾ ಆಚರಣೆ ಮಾಡಲಾಗುತ್ತಿದೆ ಎಂಬ ಹೇಳಿಕೆ ವಾಸ್ತವವಾಗಿ ತಪ್ಪಾಗಿವೆ.
ಅಷ್ಟರಾತ್ರಿಗಳು, ನವರಾತ್ರಿಗಳು, ದಶರಾತ್ರಿಗಳು ಹಾಗೂ 11 ದಿನಗಳ ಕಾಲ ನಡೆಸಿದ ಹಲವು ನಿದರ್ಶನಗಳಿವೆ ಎಂದು ತಿಳಿಸಿದ್ದಾರೆ.
ಮುಖ್ಯವಾಗಿ ಅರಮನೆಯ ಪಂಚಾಂಗದ ಅನುಸಾರ, ಹಬ್ಬದ ಆಚರಣೆಗಳ ಅವಧಿಯ ವ್ಯತ್ಯಾಸಗಳು ಖಗೋಳ ಅಂಶಗಳಿಂದ ನಿರ್ದಿಷ್ಟವಾಗಿ ಸೂರ್ಯ ಮತ್ತು ಚಂದ್ರನ ಚಲನೆ ಹಾಗೂ ಚಂದ್ರನ ದಿನಗಳು ಹಾಗೂ ದಿನಾಂಕಗಳ ಜೋಡಣೆಯನ್ನು ನಿರ್ಧರಿಸುತ್ತವೆ.
ಅಲ್ಲದೆ, 1920, 1929, 1952, 1962, 1980, 1990, 1998, 2000, 2015 ಹಾಗೂ 2016ರಲ್ಲಿ ದಸರಾವನ್ನು 11 ದಿನಗಳ ಕಾಲ ಆಚರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತಕ ಸಾಲಿನ ದಸರಾ ಹಾಗೂ ಅರಮನೆಯ ನವರಾತ್ರಿ ಆಚರಣೆಗಳು ಕೂಡ 11 ದಿನಗಳ ಕಾಲ ನಡೆಯಲಿದ್ದು, ಇದು ಅರಮನೆ ಪಂಚಾಂಗ ಪ್ರಕಾರ ನಡೆಯುವ ಸಾಂಪ್ರದಾಯಿಕ ಆಚರಣೆಯಾಗಿದೆ. ಆದ್ದರಿಂದ ಇದು ಹೊಸದೇನಲ್ಲ ಹಾಗೂ ಮೊದಲೂ ಸಹ ಅಲ್ಲ ಎಂದು ಹೇಳಿದ್ದಾರೆ.