

ಹನೂರು: ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಪಟ್ಟಣದಲ್ಲಿ ಪಟಾಕಿ ವ್ಯಾಪಾರ ಕುಸಿತಗೊಂಡಿದ್ದು, ಈ ಬಾರಿ ಜನತೆ ಪಟಾಕಿ ಖರೀದಿಸಲು ಮುಗಿ ಬಿದ್ದಿದ್ದಾರೆ.
ಕೋವಿಡ್‌ನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿ ಹನೂರು ಭಾಗದಲ್ಲಿ ಹಬ್ಬದ ವಾತವರಣ ಕಳೆಗುಂದಿತ್ತು. ಈತನ್ಮಧ್ಯೆ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿದ್ದರಿಂದ ಪಟ್ಟಣದಲ್ಲಿ ತಲೆ ಎತ್ತಿದ್ದ ಪಟಾಕಿ ಮಳಿಗೆಗಳಲ್ಲಿ ವ್ಯಾಪಾರ ಕ್ಷೀಣಗೊಂಡಿತ್ತು. ಇದರಿಂದ ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದು ಒಂದೆಡೆಯಾದರೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗದ ಜನರಲ್ಲಿ ನಿರಾಸೆ ಉಂಟಾಗಿದ್ದು ಮತ್ತೊಂದೆಡೆ.
ಆದರೆ, ಈ ಬಾರಿ ಕೋವಿಡ್ ತಗ್ಗಿರುವ ಪರಿಣಾಮ ಕ್ಷೇತ್ರದ ಜನತೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಮುಂದಾಗಿದ್ದಾರೆ. ಪಟ್ಟಣದಲ್ಲಿ ತಲೆ ಎತ್ತಿರುವ 3 ಮಳಿಗೆಗಳಲ್ಲಿ ಪಟಾಕಿ ಖರೀದಿಸಲು ಸೋಮವಾರ ಜನರು ಮುಗಿ ಬಿದ್ದರು. ಇದರಿಂದ ಪಟ್ಟಣದಲ್ಲಿ ಪಟಾಕಿ ವ್ಯಾಪಾರ ಬಲು ಜೋರಾಗಿಯೇ ನಡೆಯಿತು. 2 ವರ್ಷದಿಂದ ಕಳೆಗುಂದಿದ್ದ ವ್ಯಾಪಾರಸ್ಥರ ಮೊಗದಲ್ಲಿ ಈ ಬಾರಿ ಕೊಂಚ ಮಂದಹಾಸ ಮೂಡಿದ್ದು, ವ್ಯಾಪಾರ-ವಹಿವಾಟಿನಲ್ಲಿ ಕ್ರೀಯಾಶಿಲತೆಯಿಂದ ತೊಡಗಿದ್ದರು.
ಹಬ್ಬದ ಸಂಭ್ರಮ: ಈಗಾಗಲೇ ಹನೂರು ಭಾಗದ ಜನರಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿರುವುದು ಒಂದೆಡೆಯಾದರೆ ಮಹದೇಶ್ವರಬೆಟ್ಟದಲ್ಲೂ ಈಗ ದೀಪಾವಳಿಯ ಸಂಭ್ರಮವಿರುವುದು ಮತ್ತೊಂದೆಡೆ. ಈ ದಿಸೆಯಲ್ಲಿ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಮ.ಬೆಟಕ್ಕೆ ಭೇಟಿ ನೀಡಿದ್ದು, ವಿವಿಧ ಸೇವಾ ಉತ್ಸವಗಳಲ್ಲಿ ಭಾಗಿಯಾಗಿದ್ದು, ದೀಪಾವಳಿ ಹಬ್ಬವನ್ನು ಮ.ಬೆಟ್ಟದಲ್ಲಿಯೇ ಆಚರಿಸುತ್ತಿದ್ದಾರೆ.