

ಹನೂರು:
ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಜೋರು ಮಳೆಯಾಗ್ಗಿು, ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ತಾಲೂಕಿನಾದ್ಯಂತ ಕಳೆದ ಐದಾರು ದಿನಗಳಿಂದ ರಾತ್ರಿ ವೇಳೆ ಉತ್ತಮ ಮಳೆಯಾಗುತ್ತಿದೆ. ಇದರಿಂದ ರಾಗಿ ಹಾಗೂ ಮುಸುಕಿನ ಜೋಳ ಬೆಳೆಗೆ ಸಹಕಾರಿಯಾಗಿದೆ. ಇದರಿಂದ ರೈತರಲ್ಲಿ ಸಂತಸ ಮನೆಮಾಡಿದೆ. ಮಂಗಳವಾರ ಬೆಳಗ್ಗೆ 6 ರಿಂದ 10.30 ರವರೆಗೆ ಪಟ್ಟಣ ಸೇರಿದಂತೆ ತಾಲೂಕಿನ ಲೊಕ್ಕನಹಳ್ಳಿ ಹಾಗೂ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಜೋರು ಮಳೆಯಾಗಿದ್ದು, ಹನೂರಿಗೆ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವವರ ಜನರ ಸಂಖ್ಯೆ ಕ್ಷೀಣವಾಗಿತ್ತು.
ಕೆಲ ರಸ್ತೆ ಬದಿ ವ್ಯಾಪಾರಿಗಳು ಮಳೆಯಿಂದಾಗಿ ವ್ಯಾಪಾರ ಸ್ಥಗಿತಗೊಳಿಸಿದ್ದರು. ಹಳ್ಳಿಗಳಲ್ಲಿ ಬಹುತೇಕ ಜನರು ಹೊರಗೆ ಬಾರದೆ ಮನೆಯಲ್ಲೇ ಕಾಲ ಕಳೆದರು. ಬೆಳಗಿನ ಜಾವ ದ ಹಾಲು, ಪತ್ರಿಕೆ ವಿತರಿಸುವವರು ಮಳೆಯಿಂದ ತೊಂದರೆ ಅನುಭವಿಸಿದರು.
ಹನೂರು ಭಾಗದಲ್ಲಿ ಹೆಚ್ಚಿನ ರೈತರು ರಾಗಿ ಹಾಗೂ ಮುಸುಕಿನ ಜೋಳ ಬಿತ್ತನೆ ಮಾಡಿದ್ದು, ಸೊರಗುತ್ತಿದ್ದ ಪೈರುಗಳಿಗೆ ಮಳೆಯಿಂದಾಗಿ ಜೀವಕಳೆ ಬಂದಿದೆ. ಕಳೆದ 3 ದಿನಗಳಿಂದ ಬಹುತೇಕ ರೈತರು ರಾಗಿ ಬಿತ್ತಿರುವ ಜಮೀನಿನಲ್ಲಿ ಮಹಿಳಾ ಕೂಲಿ ಕಾರ್ಮಿಕರಿಂದ ಕಳೆ ತೆಗೆಸುತ್ತಿದ್ದಾರೆ. ಮಂಗವಾರವೂ ಬೆಳಗ್ಗೆ ಕಳೆ ತೆಗೆಯಲು ಕೂಲಿ ಕಾರ್ಮಿಕರು ತೆರಳಿದ್ದರು. ಆದರೆ ಕೆಲವು ಕಡೆ ಮಳೆ ಸುರಿಯುತ್ತಿದ್ದರಿಂದ ಹಾಗೂ ಇನ್ನು ಕೆಲವು ಕಡೆ ಜಮೀನಿನಲ್ಲಿ ತೇವಾಂಶ ಹೆಚ್ಚಿದ್ದ ಪರಿಣಾಮ ಕೂಲಿ ಕಾರ್ಮಿಕರು ಕಳೆ ತೆಗೆಯಲು ಸಾಧ್ಯವಾಗದೇ ಮನೆಗೆ ಹಿಂತಿರುಗಿದರು.
ತಟ್ಟೆಹಳ್ಳದಲ್ಲಿ ನೀರಿನ ಹರಿವು ಹೆಚ್ಚಳ: ತಾಲೂಕಿನ ಒಡೆಯರಪಾಳ್ಯದ ಭಾಗದಲ್ಲಿ ಹಾಗೂ ಬಿಆರ್‌ಟಿ ವನ್ಯಜೀವಿ ಧಾಮದಲ್ಲಿ ಜೋರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಹುಬ್ಬೆಹುಣಸೆ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದ್ದು, ಹನೂರು ಪಟ್ಟಣದಲ್ಲಿ ಹಾದು ಹೋಗಿರುವ ತಟ್ಟೆಹಳ್ಳದಲ್ಲೂ ಹೆಚ್ಚಿನ ನೀರು ಹರಿಯುತ್ತಿದೆ.
ಸಂಚಾರಕ್ಕೆ ತೊಂದರೆ: ಮಳೆಯಿಂದಾಗಿ ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಸ್ಥಾನದ ರಸ್ತೆ, ಗುರುಮಲ್ಲೇಶ್ವರ ಮಠದ ಬೀದಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ, ಖಾಸಗಿ ಬಸ್ ನಿಲ್ದಾಣದ ಬಳಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪ (ಲೊಕ್ಕನಹಳ್ಳಿ ರಸ್ತೆ ಬದಿ) ಸೇರಿದಂತೆ ಕೆಲವು ಕಡೆ ಗುಂಡಿಗಳಲ್ಲಿ ನೀರು ನಿಂತಿತ್ತು. ಇದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸುವಂತಾಯಿತು.