

ಹನೂರು: ಹನೂರು ಗಡಿ ತಾಲೂಕು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ. ಹಾಗಾಗಿ ವಿಶೇಷ ಅನುದಾನ ನೀಡದಿದ್ದಲ್ಲಿ ಕೊನೆಗೆ ಹೋರಾಟದ ಮೂಲಕವಾದರೂ ಅನುದಾನ ತಂದು ಕ್ಷೇತ್ರದ ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇನೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಹನೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಶೀಘ್ರ ಆಗಬೇಕಿದೆ. ರೈತರಿಗೆ ನೀರಾವರಿ ವಿದ್ಯುತ್ ವ್ಯವಸ್ಥೆ ಒದಗಿಸಲಾಗುವುದು. ಇನ್ನು ತಾಲೂಕು ಕಚೇರಿ ಸ್ಥಾಪನೆ ಸಂಬಂಧ ಈಗಾಗಲೇ ಪ್ರಸ್ತಾವನೆ ಸಿದ್ಧವಾಗಿದೆ. ಪಟ್ಟಣದಲ್ಲಿರುವ ಎಪಿಎಂಸಿ ಮುಚ್ಚುವ ಹಂತದಲ್ಲಿದೆ. ಅದಕ್ಕೆ ಜೀವ ಕೊಡುವ ಕೆಲಸವಾಗಬೇಕಿದೆ. ಜತೆಗೆ ಮನೆ ಇಲ್ಲದವರಿಗೆ ವಸತಿ ನೀಡುವುದರ ಮೂಲಕ ಕ್ಷೇತ್ರದ ಜನರಿಗೆ ನೆಮ್ಮದಿಯ ವಾತಾವರಣ ನಿರ್ಮಿಸುವುದೇ ನನ್ನ ಉದ್ದೇಶ. ಹಾಗಾಗಿ ಒಂದು ವರ್ಷದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಭಿನಂದನೆ: ಇದಕ್ಕೂ ಮುನ್ನ ಶಾಸಕ ಎಂ.ಆರ್. ಮಂಜುನಾಥ್ ಅವರನ್ನು ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಉಪ ವಿಭಾಗಾಧಿಕಾರಿ ಗೀತಾ ಹುಡೇದ, ಡಿವೈಎಸ್ಪಿ ಸೋಮೇಗೌಡ, ತಹಸೀಲ್ದಾರ್ ಗುರುಪ್ರಸಾದ್, ಬಿಇಒ ಶಿವರಾಜು, ತಾಪಂ ಇಒ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗಂಗಾಧರ್, ಪಿಡಬ್ಲೂೃಡಿ ಎಇಇಗಳಾದ ರಾಜೇಶ್ ಮುನ್ಸಿ, ನಿರ್ಮಿತಿ ಕೇಂದ್ರದ ಎಇಇ ರವಿಕುಮಾರ್ ಇತರರು ಅಭಿನಂದಿಸಿದರು.