ಹನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ

HNR 1
Published on

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದಲ್ಲಿ ಶನಿವಾರ ಮಾಜಿ ಸಚಿವ ದಿ. ರಾಜುಗೌಡ ಅವರ ಸಮಾಧಿಗೆ 19ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪುತ್ರ ಶಾಸಕ ಆರ್.ನರೇಂದ್ರ ಪೂಜೆ ಸಲ್ಲಿಸಿದರು.


ತಂದೆ ರಾಜುಗೌಡ ಅವರು ತಮ್ಮ ಜೀವನವನ್ನೇ ಹನೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದರು. ಇವರು ಶಾಸಕರಾಗಿದ್ದ ವೇಳೆ ಕ್ಷೇತ್ರ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ರೈತರಿಗೆ ನಿವೇಶನ ಹಾಗೂ ವಸತಿ ನೀಡುವ ಮೂಲಕ ಗುಡಿಸಲು ಮುಕ್ತ ಕ್ಷೇತ್ರವನ್ನಾಗಿಸಲು ಪಣತೊಟ್ಟಿದ್ದರು. ಕ್ಷೇತ್ರದಲ್ಲಿನ ಅಭಿಮಾನಿಗಳು ತಮ್ಮ ಮನೆಯಲ್ಲಿ ಇಂದಿಗೂ ರಾಜುಗೌಡರ ಭಾವಚಿತ್ರವನ್ನು ಇಟ್ಟುಕೊಂಡು ದೇವರಂತೆ ಕಾಣುತ್ತಿದ್ದಾರೆ ಎಂದರು.


ನಾನು 4 ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಕಳೆದ 15 ವರ್ಷಗಳಿಂದ ಶಾಸಕನಾಗಿ ತಂದೆ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ. ಕ್ಷೇತ್ರದ ಜನರು ನಮ್ಮ ಕುಟುಂಬದ ಮೇಲೆ ಅಭಿಮಾನವಿಟ್ಟು ಸತತ 9 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡುವ ಮೂಲಕ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನತೆಯ ಅಭಿಮಾನಕ್ಕೆ ನಾನು ಸದಾ ಋಣಿ. ಮುಂದೆಯೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತೇನೆ ಎಂದು ತಿಳಿಸಿದರು.


ಇದೇ ವೇಳೆ ರಾಜುಗೌಡರ ಸಮಾಧಿ ಬಳಿಗೆ ನೂರಾರು ಅಭಿಮಾನಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಶಾಸಕ ಆರ್.ನರೇಂದ್ರ ಅವರ ಪತ್ನಿ ಆಶಾ, ಪುತ್ರ ನವನೀತ್ ಗೌಡ, ಪುತ್ರಿ ನಿಖಿತಾ, ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದ ವರ್ಮಾ, ಕೊಳ್ಳೇಗಾಲದ ತೋಟೇಶ್, ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಹರೀಶ್ ಕುಮಾರ್, ಸುದೇಶ್, ಸಂಪತ್ ಕುಮಾರ್, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜ್, ಹನೂರು ಘಟಕದ ಅಧ್ಯಕ್ಷ ಮಾದೇಶ್, ಮುಖಂಡರಾದ ನಾಗರಾಜು, ಲೋಕೇಶ್, ರಾಚಪ್ಪ, ಸುರೇಶ್, ದೇವೇಗೌಡ, ರಾಮಲಿಂಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net