

ಚಾಮರಾಜನಗರ : ಸದಸ್ಯರ ಸಹಕಾರ ಹಾಗೂ ಸಕಾಲಕ್ಕೆ ಬಡ್ಡಿ ಪಾವತಿಸಿದ್ದರಿಂದ ಪ್ರಸ್ತುತ ಸಾಲಿನಲ್ಲಿ ಸಂಘವು ನಿರೀಕ್ಷೆಗೂ ಮೀರಿ ರೂ.18.43 ಲಕ್ಷ ಲಾಭಗಳಿಸಿದೆ ಎಂದು ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಬಿ.ಬಸವರಾಜು ಹೇಳಿದರು.
ಹನೂರು ಪಟ್ಟಣದ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಸಂಘವು 16 ಗ್ರಾಮಗಳನ್ನು ಒಳಗೊಂಡಿದ್ದು, 1,644 ಸದಸ್ಯರನ್ನು ಹೊಂದಿದೆ. ಕಟ್ಟಡ, ಸಿಬ್ಬಂದಿ ಕಲ್ಯಾಣ, ಸಹಕಾರ ಶಿಕ್ಷಣ ನಿಧಿ ಸೇರಿದಂತೆ ಒಟ್ಟು ರೂ. 1.26 ಕೋಟಿ ಬಂಡವಾಳ ಹೊಂದಿದ್ದು, ಅಂಚೆ ಕಚೇರಿ, ಬ್ಯಾಂಕ್ ಹಾಗೂ ಇನ್ನಿತರೆ ಕಚೇರಿಗಳಲ್ಲಿ 2.72 ಕೋಟಿ ರೂ ಹೂಡಿಕೆ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ 107 ಸದಸ್ಯರಿಗೆ 1.7 ಕೋಟಿ ರೂ ಸಾಲ ನೀಡಲಾಗಿದ್ದು, ಬಹುತೇಕ ರೈತರು ಮರುಪಾವತಿಸಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಎಂಡಿಸಿಸಿ ಬ್ಯಾಂಕ್‌ನಿಂದ ನೀಡುವ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಹನೂರು ಕೃಷಿ ಪತ್ತಿನ ಸಹಕಾರ ಸಂಘ ಕಳೆದ 10 ವರ್ಷದಿಂದ ಪಡೆಯುತ್ತಾ ಬಂದಿದೆ ಎಂದರು.
ಸಭೆಯಲ್ಲಿ ಲೆಕ್ಕ ಪತ್ರ ಪರಿಶೀಲಿಸಿ ಅಂಗೀಕರಿಸಲಾಯಿತು. ಸಂಘದ ಅಧ್ಯಕ್ಷ ರಾಚಪ್ಪ, ಉಪಾಧ್ಯಕ್ಷ ಸೈಯದ್ ಭಾಷ, ನಿರ್ದೇಶಕರಾದ ಗೋವಿಂದ, ಬಸವರಾಜು, ಸಿದ್ದರಾಜು, ನಟರಾಜು, ಲಿಂಗೇಗೌಡ, ಶ್ರೀನಿವಾಸ್‌ಗೌಡ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಂ.ಕೆ ಶ್ರೀಧರ್ ಇತರರು ಇದ್ದರು.