ಹನೂರು ಅಭಿವೃದ್ಧಿಗೆ ಶ್ರಮಿಸಿ : ಶಾಸಕ ಎಂ.ಆರ್ ಮಂಜುನಾಥ್ ಮನವಿ

22 HANUR 2
????????????????????????????????????
Published on

ಚಾಮರಾಜನಗರ: ಹನೂರು ಪಟ್ಟಣದ ಅಭಿವೃದ್ಧಿಗೆ ಪ್ರತಿಯೊಬ್ಬರು ಪಕ್ಷಾತೀತವಾಗಿ ಸಹಕಾರ ನೀಡಬೇಕು. ಇದರಿಂದ ಮಾದರಿ ಪಟ್ಟಣವನ್ನಾಗಿಸಲು ಸಾಧ್ಯ ಎಂದು ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.


ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.


ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಆಗಾಗ್ಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿರುವುದು ನನ್ನ ಗಮನಕ್ಕೆ ಬಂದಿದೆ. ಈ ದಿಸೆಯಲ್ಲಿ ಜಿಲ್ಲಾಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇನ್ನು ಪಟ್ಟಣ ಪಂಚಾಯಿತಿಯಲ್ಲಿ ನೌಕರರ ಕೊರತೆಯ ಪರಿಣಾಮ ಸಾರ್ವಜನಿಕ ಕೆಲಸ ಕಾರ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವುದರಿಂದ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗುವುದು. ಜತೆಗೆ ಮಾದರಿ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಈ ದಿಸೆಯಲ್ಲಿ ಅಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರ ಸಲಹೆ ಪಡೆದು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಸದಸ್ಯರು ಸಹಕಾರ ನೀಡಬೇಕು ಎಂದು ತಿಳಿಸಿದರು.


ಸಭೆಯಲ್ಲಿ 3ನೇ ವಾರ್ಡಿನ ಸದಸ್ಯ ಹರೀಶ್‌ಕುಮಾರ್ ಮಾತನಾಡಿ, ಜಿಲ್ಲಾ ಯೋಜನಾ ನಿರ್ದೇಶಕರು ಹಾಗೂ ನಗರಾಭಿವೃದ್ಧಿ ಕೋಶದ ನೌಕರ ಗಿರಿರಾಜ್ ಪಟ್ಟಣದ ಅಭಿವೃದ್ಧಿಗೆ ಹಸ್ತಕ್ಷೇಪ ಮಾಡುತ್ತಿರುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ ಎಂದರು. 13ನೇ ವಾಡಿನ ಸದಸ್ಯ ಮಹೇಶ್ ಮಾತನಾಡಿ, ಸರ್ಕಾರಿ ಇಲಾಖೆಗಳಿಂದಲೇ ಪಪಂಗೆ ಲಕ್ಷಾಂತರ ರೂ.ಕಂದಾಯ ಪಾವತಿ ಬಾಕಿ ಇದೆ. ಆದ್ದರಿಂದ ಕಂದಾಯ ವಸೂಲಾತಿಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.


ಪಪಂ ಆಡಳಿತಾಧಿಕಾರಿ ಧನಂಜಯ, ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಸದಸ್ಯರಾದ ಪವಿತ್ರಾ, ಮಂಜುಳಾ, ಮಮ್ತಾಜ್‌ಬಾನು, ಗಿರೀಶ್, ಸುದೇಶ್, ಆನಂದ್, ಸಂಪತ್‌ಕುಮಾರ್, ಮಹೇಶ್‌ನಾಯ್ಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net