ಹನೂರು ಅಭಿವೃದ್ಧಿಗೆ ಆದ್ಯತೆ ನೀಡಲು ಒತ್ತಾಯ

MUTTAIAH
Published on

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಹನೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಷ್ಟ್ರೀಯ ಆದಿವಾಸಿ ಸಂಘಟನೆ ಸದಸ್ಯ ವಿ.ಮುತ್ತಯ್ಯ ಮನವಿ ಮಾಡಿದ್ದಾರೆ.

ಮಲೆಮಹದೇಶ್ವರ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಆದರೆ ಅರಣ್ಯ ಪ್ರದೇಶದೊಳಗೆ ಹಾಗೂ ಅಂಚಿನಲ್ಲಿ ಹಲವು ದಶಕಗಳಿಂದಲೂ ವಾಸಿಸುತ್ತಿರುವ ಬೇಡಗಂಪಣರು ಹಾಗೂ ಸೋಲಿಗರ ಹಾಡಿಗಳಿಗೆ ಸಮರ್ಪಕ ಕುಡಿಯುವ ನೀರು, ವಿದ್ಯುತ್, ರಸ್ತೆ, ಮನೆ, ಆರೋಗ್ಯ ಸೇವೆಯನ್ನು ಒದಗಿಸದಿರುವುದು ವಿಪರ್ಯಾಸ.

ಹಾಗಾಗಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಆದ್ಯತೆ ನೀಡಿ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಬೇಕು. ಮ.ಬೆಟ್ಟದಲ್ಲಿ ಆರೋಗ್ಯ ಸಂಚಾರಿ ಘಟಕ ಸ್ಥಾಪನೆಯಾಗಬೇಕು. ಸುಸಜ್ಜಿತ ಬಸ್ ನಿಲ್ದಾಣವಾಗಬೇಕು. ತಾಲೂಕಿನಲ್ಲಿ ಪಂಚಾಯತ್ ಸೌಧ ನಿರ್ಮಾಣವಾಗಬೇಕು. ಗೋಪಿನಾಥಂ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಆಲಂಬಾಡಿ ಪೋಡು ಸೇರಿದಂತೆ ಈ ಭಾಗದ ಗ್ರಾಮಗಳು ಅಭಿವೃದ್ಧಿಯಾಗಬೇಕು.

ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬರುವ ಆದಾಯದಲ್ಲಿ ಶೇ.35 ರಷ್ಟು ಹಣವನ್ನು ಸ್ಥಳೀಯ ಪ್ರದೇಶಾಭಿವೃದ್ಧಿಗೆ ಮೀಸಲಿಡಬೇಕು. ಇನ್ನು ಹನೂರು ತಾಲೂಕು ರಚನೆಯಾಗಿ 6 ವರ್ಷವೇ ಕಳೆದಿದೆ. ಆದರೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಕಚೇರಿಗಳು ಸ್ಥಾಪನೆಯಾಗಿಲ್ಲ. ಹಾಗಾಗಿ ಕಚೇರಿಗಳು ಸ್ಥಾಪನೆಯಾಗಬೇಕು ಎಂದು ವಿ.ಮುತ್ತಯ್ಯ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net