ಹನೂರು: ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಗುರುವಾರ ಹನೂರಿನಲ್ಲಿ ಬಿಜೆಪಿ ಮಂಡಲದ ವತಿಯಿಂದ ಹರ್ ಘರ್ ತಿರಂಗಾ ಕಾರ್ಯಕ್ರಮದಡಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣ ಸಮೀಪದ ಆರ್.ಎಸ್ ದೊಡ್ಡಿಯ ಶ್ರೀ ಮಹದೇಶ್ವರ ದೇಗುಲದ ಬಳಿ ಬೈಕ್ ರ‌್ಯಾಲಿಗೆ ಬಿಜೆಪಿ ಹನೂರು ಮಂಡಲಾಧ್ಯಕ್ಷ ಕಣ್ಣೂರು ಕೆ.ಪಿ ವೃಷಭೇಂದ್ರಸ್ವಾಮಿ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಆ.12 ರಿಂದ 15ರವರೆಗೆ ದೇಶಾದ್ಯಂತ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಈ ದೆಸೆಯಲ್ಲಿ ದೇಶಕ್ಕೆ ಗೌರವ ಸಲ್ಲಿಸುವ ಸಲುವಾಗಿ ಹಾಗೂ ದೇಶದ ಅಖಂಡತೆ, ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಪಕ್ಷದ ವತಿಯಿಂದ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಮೀಣ್ಯಂನಲ್ಲಿರುವ ಹುತಾತ್ಮ ಸ್ಮಾರಕವನ್ನು ಶುಚಿಗೊಳಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದರು.
ಸ್ವಾತಂತ್ರೃಕ್ಕೆ ಹೋರಾಟ ನಡೆಸಿದ ಮಹನೀಯರನ್ನು ಸ್ಮರಿಸುತ್ತಾ ಗೌರವ ಸಲ್ಲಿಸಬೇಕು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ದೇಶಪ್ರೇಮ ಮೆರೆಯಬೇಕು ಎಂದು ತಿಳಿಸಿದರು. ಬಳಿಕ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರ ಬೈಕ್ ರ‌್ಯಾಲಿಯು ಮ.ಬೆಟ್ಟ ಮುಖ್ಯರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ಮೂಲಕ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣಕ್ಕೆ ತಲುಪಿ ಅಂತ್ಯಗೊಂಡಿತು. ಈ ವೇಳೆ ಕಾರ್ಯಕರ್ತರು ದೇಶಭಕ್ತಿಯ ಘೋಷಣೆಗಳನ್ನು ಮೊಳಗಿಸಿದರು.
ಇದಕ್ಕೂ ಮುನ್ನ ಕಾರ್ಯಕರ್ತರು ಮೀಣ್ಯಂ ಸಮೀಪದ ಬೂದಿಕೆರೆ ರಸ್ತೆ ತಿರುವಿನಲ್ಲಿ ಕಾಡುಗಳ್ಳ ವೀರಪ್ಪನ್ ಒಳಸಂಚಿಗೆ ಬಲಿಯಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹುತಾತ್ಮರ ಸ್ಮಾರಕಕ್ಕೆ ತೆರಳಿ ಶುಚಿಗೊಳಿಸಿ ಗೌರವ ವಂದನೆ ಸಲ್ಲಿಸಲಾಯಿತು.
ಒಬಿಸಿ ಜಿಲ್ಲಾ ಸಂಚಾಲಕ ಲೋಕೇಶ್ ಜತ್ತಿ, ಮಂಡಲದ ಕಾರ್ಯದರ್ಶಿಗಳಾದ ವರಪ್ರಸಾದ್, ಮೂರ್ತಿ, ಯುವ ಮೋರ್ಚಾ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಚಿರಂಜೀವಿ, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್, ಒಬಿಸಿ ಮೋರ್ಚಾಧ್ಯಕ್ಷ ಬಸವರಾಜು, ಮಂಡಲದ ಮಾಜಿ ಅಧ್ಯಕ್ಷ ಜಗನ್ನಾಥ ನಾಯ್ಡು, ಮುಖಂಡರಾದ ನಂಜುಂಡಸ್ವಾಮಿ, ಮಲ್ಲುಸ್ವಾಮಿ, ವಿಜಯಕುಮಾರ್, ಶ್ರೀನಿವಾಸಮೂರ್ತಿ, ಶಿವರಾಜು ಹಾಗೂ ಇನ್ನಿತರರು ಇದ್ದರು.