

ಹನೂರು: ಯಾರು ಈ ಭೂಮಿಯನ್ನು ನನ್ನ ತಾಯಿ ಎಂದು ಪೂಜಿಸುತ್ತಾರೋ ಅವರೇ ನಿಜವಾದ ಹಿಂದುಗಳು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮೈಸೂರು ವಿಭಾಗದ ಪ್ರಚಾರ ಪ್ರಮುಖ್ ಮೋಹನ್ ತಿಳಿಸಿದರು.
ಪಟ್ಟಣದ ಬಿಎಂಜಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಆರ್‌ಎಸ್‌ಎಸ್ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಶಿಕ್ಷಾ ವರ್ಗ-2022 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಮಾಜದಲ್ಲಿ ರಾಷ್ಟ್ರಭಕ್ತಿ ಮೂಡಿಸಲು ಸಂಘದ ವತಿಯಿಂದ ಹನೂರಿನಲ್ಲಿ ವಿದ್ಯಾರ್ಥಿಗಳಿಗೆ ಕಳೆದ 7 ದಿನಗಳ ಕಾಲ ಶಾರೀರಿಕ, ಬೌದ್ಧಿಕ ಶಿಕ್ಷಣದ ಜತೆಗೆ ಸಾಮಾಜಿಕ ಶಿಕ್ಷಣ ನೀಡಲಾಗಿದೆ. ಇದರಿಂದ ಪರಸ್ಪರ ಸಾಮರಸ್ಯ ಮೂಡಿಸಲು ಸಹಕಾರಿಯಾಗಿದೆ. ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ. ಈ ದಿಸೆಯಲ್ಲಿ ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಹಿಂದುಗಳು ಒಂದಾಗಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಸಂಚಾಲಕ ಕೆ.ವಿ.ರಾಜಣ್ಣ ಮಾತನಾಡಿ, ತರಬೇತಿ ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಯೋಗಾಸಾನ, ಗೋ ಶಿಕ್ಷಣ, ಸಂಸ್ಕಾರ, ಸಾಮೂಹಿಕ ಸಹಕಾರ ಸೇರಿದಂತೆ ದೇಹ ದಂಡನೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್ ದತ್ತೇಶ್‌ಕುಮಾರ್, ಒಬಿಸಿ ಮೋರ್ಚಾದ ಜಿಲ್ಲಾ ಸಂಯೋಜಕ ಬಿ.ವೆಂಕಟೇಶ್, ಮುಖಂಡ ಪ್ರೀತನ್ ನಾಗಪ್ಪ, ಶಿಬಿರದ ಕಾರ್ಯವಾಹ ಶಿವುಕುಮಾರ್ ಇತರರು ಇದ್ದರು.
ಸ್ವಯಂ ಸೇವಕರು ಸಂಘದ ಸ್ಥಾಪಕರಾದ ಕೇಶವ ಬಲಿರಾಮ್ ಹೆಡಗೆವಾರ್ ಮತ್ತು ಸದಾಶಿವರಾಮ್ ಗೋಲ್ವಾಲ್ಕರ್ ಅವರ ಭಾವಚಿತ್ರದೊಂದಿಗೆ ಪೊಲೀಸ್ ಭದ್ರತೆಯಲ್ಲಿ ಪಥಸಂಚಲನ ನಡೆಸಲಾಯಿತು.