

ಬೀದರ್: ಜನವಾಡ ರಸ್ತೆಯ ನಾವದಗೇರಿ ಧರಿಯಲ್ಲಿನ ಕುಂದನಕೇರಿ ಸಂಕಟ ಮೋಚನ ಶ್ರೀ ಹನುಮಾನ ಮಂದಿರದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಂಗಳವಾರ ಶ್ರದ್ಧೆ, ಭಕ್ತಿಯೊಂದಿಗೆ ಜರುಗಿತು.
ಶ್ರೀ ಎನ್.ಬಿ. ರೆಡ್ಡಿ ಗುರೂಜಿ ನೇತೃತ್ವದಲ್ಲಿ ಹೋಮ, ಹವನ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಾವದಗೇರಿ ಅಕ್ಕಮಹಾದೇವಿ ಮಂದಿರ ಹತ್ತಿರ ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಉಪಾಧ್ಯಕ್ಷ ವಿಜಯಕುಮಾರ ಅಣ್ಣೆಪ್ಪ ಪಾಟೀಲ್ ಮೆರವಣಿಗೆಗೆ ಚಾಲನೆ ನೀಡಿದರು. ಸಿದ್ಧಾರ್ಥ ಕಾಲೇಜು ಮೂಲಕ ಮೆರವಣಿಗೆಯು ಮಂದಿರಕ್ಕೆ ಆಗಮಿಸಿತು.
ಯುವ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕಳಸವನ್ನು ತಲೆ ಮೇಲೆ ಹೊತ್ತು ಮಂದಿರವರೆಗೆ ಹೆಜ್ಜೆ ಹಾಕಿದರು. ಕುಂಭ, ಕಳಸ ಹೊತ್ತ ನೂರಾರು ಮಹಿಳೆಯರು ಮೆರವಣಿಗೆಗೆ ಮೆರಗು ನೀಡಿದರು. ಬಂಜಾರ ನೃತ್ಯ, ಡೊಳ್ಳು, ಹಲಗೆ ಕುಣಿತಗಳು ಮೆರಗು ಹೆಚ್ಚಿಸಿದವು. ರಾತ್ರಿ ಖ್ಯಾತ ಕಲಾವಿದರಿಂದ ಸಂಗೀತ ದರ್ಬಾರ್ ನಡೆಯಿತು.
ಪ್ರಮುಖರಾದ ಪಿ.ನಾರಾಯಣರಾವ್, ಬಾಬು ಪಾಸ್ವಾನ್, ವಿಜಯಕುಮಾರ ಸೋನಾರೆ, ಫರ್ನಾಂಡಿಸ್, ಸುನೀಲ ಬಚ್ಚನ್, ಓಂಕಾರ ಬಜಾರೆ, ರಾಜಕುಮಾರ ಗುನ್ನಳ್ಳಿ, ಡಾ.ರಾಜಕುಮಾರ ಹೆಬ್ಬಾಳೆ, ಡಾ.ವಿಶ್ವನಾಥ ತೇಗಂಪುರೆ, ಆದೀಶ್ ವಾಲಿ, ಶ್ರೀಕಾಂತ ಪಾಟೀಲ್, ಪುಂಡಲೀಕರಾವ ಪಾಟೀಲ್ ಗುಮ್ಮಾ, ಡಾ.ರಘುಶಂಖ ಭಾತಂಬ್ರಾ, ರಾಜಕುಮಾರ ಮಾಳಗೆ, ನರಸಪ್ಪ ದಳಪತಿ, ಅಶೋಕ ಪಾಟೀಲ್, ಕಲ್ಲಯ್ಯ ಸ್ವಾಮಿ, ನಾಗಶೆಟ್ಟಿ ರಾಂಪುರೆ, ಮಲ್ಲಿಕಾರ್ಜುನ ಇಟಗಿ, ಸಿದ್ರಾಮಯ್ಯ ಸ್ವಾಮಿ, ರಾಜಕುಮಾರ ರಾಂಪುರೆ, ವಿರೂಪಾಕ್ಷ ಸ್ವಾಮಿ ಇತರರಿದ್ದರು.