

ಬೀದರ್: ನಗರದ ಜನವಾಡ ರಸ್ತೆಯಲ್ಲಿನ ನಾವದಗೇರಿ ಧರಿಯಲ್ಲಿನ ಸಂಕಟ ಮೋಚನ ಹನುಮಾನ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಂಗಳವಾರ(16ರಂದು) ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ ಎಂದು ಕುಂದನಕೇರಿ ಶ್ರೀ ಹನುಮಾನ ಮಂದಿರ ಟ್ರಸ್ಟ್ ಸದಸ್ಯ ಡಾ. ರಾಜಕುಮಾರ ಹೆಬ್ಬಾಳೆ ಹೇಳಿದರು.
ಮಂದಿರದಲ್ಲಿ ಭಾನುವಾರ ಏರ್ಪಡಿಸಿದ ಕಾರ್ಯಕ್ರಮ ನಿಮಿತ್ತದ ಕರಪತ್ರಗಳ ಬಿಡುಗಡೆ ವೇಳೆ ಮಾತನಾಡಿ, ಕಾರ್ಯಕ್ರಮ ಶೃದ್ಧೆ, ಭಕ್ತಿಯೊಂದಿಗೆ ಅದ್ಧೂರಿ, ಅರ್ಥಪೂರ್ಣ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 8ಕ್ಕೆ ಹೋಮ-ಹವನ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಕಳಸಾರೋಹಣ ಮತ್ತು ಮಹಾಪ್ರಸಾದ ಜರುಗಲಿದೆ. ರಾತ್ರಿ 7ಕ್ಕೆ ಖ್ಯಾತ ಕಲಾವಿದರಿಂದ ಸಂಗೀತ ದರ್ಬಾರ್ ಜರುಗಲಿದೆ. ಐದು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ನಾವದಗೇರಿಯ ಅಕ್ಕಮಹಾದೇವಿ ಮಂದಿರದಿಂದ ಸಿದ್ಧಾರ್ಥ ಕಾಲೇಜು ಮೂಲಕ ಮಂದಿರದವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಗೆ ಜಿಪಂ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಚಾಲನೆ ನೀಡುವರು. ಅನೇಕರು ಗಣ್ಯರು, ಪ್ರಮುಖರು ಪಾಲ್ಗೊಳ್ಳುವರು. ಡೊಳ್ಳು, ಹಲಗೆ ಕುಣಿತ, ಭಜನಾ ತಂಡಗಳು, ಕೋಲಾಟ ಸೇರಿದಂತೆ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ಶ್ರೀ ಎನ್.ಬಿ. ರೆಡ್ಡಿ ಗುರೂಜಿ, ಮಂದಿರದ ಉಪಾಧ್ಯಕ್ಷ ರಾಜಕುಮಾರ ಗುನ್ನಳ್ಳಿ, ಓಂಪ್ರಕಾಶ ಬಜಾರೆ, ಡಾ. ವಿಶ್ವನಾಥ ತೇಗಂಪುರೆ, ಶ್ರೀಕಾಂತ ಪಾಟೀಲ್, ಪುಂಡಲೀಕರಾವ ಪಾಟೀಲ್ ಗುಮ್ಮಾ, ಡಾ.ರಘುಶಂಖ ಭಾತಂಬ್ರಾ, ರಾಜಕುಮಾರ ಮಾಳಗೆ, ನರಸಪ್ಪ ದಳಪತಿ, ಅಶೋಕ ಪಾಟೀಲ್, ಕಲ್ಲಯ್ಯ ಸ್ವಾಮಿ, ನಾಗಶೆಟ್ಟಿ ರಾಂಪುರೆ, ಮಲ್ಲಿಕಾರ್ಜುನ ಇಟಗಿ, ಸಿದ್ರಾಮಯ್ಯ ಸ್ವಾಮಿ, ರಾಜಕುಮಾರ ರಾಂಪುರೆ, ವಿರೂಪಾಕ್ಷ ಸ್ವಾಮಿ ಇತರರಿದ್ದರು.