ಹನುಮ ಜಯಂತಿಗೆ ಸಕಲ ಸಿದ್ಧತೆ

04Kush01
Published on

ಕುಶಾಲನಗರ: ಪಟ್ಟಣದಲ್ಲಿ ಡಿ.5 ರಂದು ಆಯೋಜಿಸಿರುವ ಹನುಮ ಜಯಂತಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದೆ.


ದಶಮಂಟಪಗಳ ಸಮಿತಿ ಆಶ್ರಯದಲ್ಲಿ ಈ ಬಾರಿ 7 ಮಂಟಪಗಳು ಭಾಗವಹಿಸಲಿದೆ. ಗುಡ್ಡೆಹೊಸೂರು, ಮಾದಪಟ್ಟಣ, ಗುಮ್ಮನಕೊಲ್ಲಿ, ಗೋಪಾಲ ಸರ್ಕಲ್, ಎಚ್‌ಆರ್‌ಪಿ ಕಾಲನಿ, ಆಂಜನೇಯ ದೇವಸ್ಥಾನ ಮತ್ತು ಬೈಚನಹಳ್ಳಿಯಿಂದ ಒಂದೊಂದು ಮಂಟಪಗಳು ಭಾಗವಹಿಸಲಿದ್ದು, ಈಗಾಗಲೇ ಮಂಟಪಗಳ ತಯಾರಿ ನಡೆಯುತ್ತಿದೆ.


ಆಂಜನೇಯ ದೇವಸ್ಥಾನದಿಂದ ಆಂಜನೇಯ ಉತ್ಸವ ಮೂರ್ತಿಯ ಮೆರವಣಿಗೆ ಇರಲಿದೆ. ಭಕ್ತರು ಉತ್ಸವ ಮೂರ್ತಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬಹುದು. ಉತ್ಸವದಲ್ಲಿ ಅಂದಾಜು 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಕುಶಾಲನಗರ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೊಲೀಸರ ಸಹಕಾರ ಉತ್ತಮವಾಗಿದೆ. ಉತ್ಸವ ಮೂರ್ತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ದಶಮಂಟಪಗಳ ಸಮಿತಿಯ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ತಿಳಿಸಿದ್ದಾರೆ.


ವಿವಿಧ ಕ್ಷೇತ್ರದ 10 ಜನರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರು ಕೊಡುವ ತೀರ್ಪಿನ ಅನುಸಾರ ಬಹುಮಾನ ನೀಡಲಾಗುವುದು. ಬಹುಮಾನ ವಿತರಣೆಗಾಗಿ ವೇದಿಕೆಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಕೆ.ಎನ್.ದೇವರಾಜ್ ತಿಳಿಸಿದರು.


ಮಡಿಕೇರಿ ದಸರಾ ಮಾದರಿಯಲ್ಲಿ ಮಂಟಪಗಳು ತಯಾರಾಗುತ್ತಿವೆ. ದಾನಿಗಳ ಸಹಕಾರದಿಂದ ಚೆನ್ನಾಗಿ ಮೂಡಿಬರುವ ನಿರೀಕ್ಷೆಯಿದೆ. ಆಂಜನೇಯ ದೇವಸ್ಥಾನದಲ್ಲಿ ಈಗಾಗಲೇ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿವೆ ಎಂದು ಎಚ್‌ಆರ್‌ಪಿ ಕಾಲನಿಯ ಡಿ.ಸಿ.ಮಂಜುನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net