ಹನುಮ ಜಯಂತಿಗೆ ಮಂಟಪಗಳ ಮೆರುಗು

06Kush02
ಕುಶಾಲನಗರ ದಶಮಂಟಪಗಳ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಹನುಮ ಜಯಂತಿ ಉತ್ಸವದಲ್ಲಿ ಮೊದಲ ಬಹುಮಾನ ಪಡೆದ ಎಚ್.ಆರ್.ಪಿ.ಕಾಲನಿಯ ಮಂಟಪ
Published on

ಕುಶಾಲನಗರ: ನಗರದಲ್ಲಿ ಸೋಮವಾರ ರಾತ್ರಿ ಜನಸಾಗರದ ನಡುವೆ ಅದ್ದೂರಿ ಹನುಮ ಜಯಂತಿಯನ್ನು ದಶಮಂಟಪಗಳ ಸಮಿತಿ ನೇತೃತ್ವದಲ್ಲಿ ಆಚರಿಸಲಾಯಿತು.
8 ಮಂಟಪಗಳ ವೈಭವೋಪೇತ ಶೋಭಾಯಾತ್ರೆಯ ಬಣ್ಣ ಬಣ್ಣದ ಲೈಟ್, ಕಿವಿಗಡಚಿಕ್ಕುವ ಡಿಜೆ ಸದ್ದಿಗೆ ಯುವಜನರು ಕುಣಿದು ಕುಪ್ಪಳಿಸಿದರು.
ದೇವರ ಕಲಾಕೃತಿಗಳ ಮೆರವಣಿಗೆ ಮಡಿಕೇರಿ ದಸರಾವನ್ನು ನೆನಪಿಸಿತು. ಮಂಟಪಗಳಲ್ಲಿ ಇದ್ದ ದೇವರ ಚಲನವಲನ ನೋಡುಗರ ಮನಸೂರೆಗೊಂಡಿತು. ಪೂರ್ವ ನಿರ್ಧಾರದಂತೆ ಎಲ್ಲ ಮಂಟಪಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತಕ್ಕೆ ಆಗಮಿಸಿದವು. ಪ್ರತಿ ಮಂಟಪದ ಜತೆ ಸಾವಿರಾರು ಜನ ಕುಣಿದು ಕುಪ್ಪಳಿಸಿದರು. ಪಟ್ಟಣದ ತುಂಬೆಲ್ಲ ಜೈಶ್ರೀರಾಮ್ ಘೋಷಣೆ ಮೊಳಗಿ, ಕೇಸರಿ ಬಣ್ಣ ರಾರಾಜಿಸಿತು.
ಶೋಭಾಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವಾಗ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಮಾದಪಟ್ಟಣ, ಗುಡ್ಡೆಹೊಸೂರು, ಗೋಪಾಲ್ ಸರ್ಕಲ್, ಕೂಡಿಗೆ, ಗುಮ್ಮನಕೊಲ್ಲಿ, ಎಚ್.ಆರ್.ಪಿ.ಕಾಲನಿ, ಬೈಚನಹಳ್ಳಿ, ರಥಬೀದಿಯ ಆಂಜನೇಯ ದೇವಸ್ಥಾನದಿಂದ ಹೊರಟ ಉತ್ಸವ ಮಂಟಪಗಳು, ರಾತ್ರಿ 8.30ರ ಹೊತ್ತಿಗೆ ಕಾರ್ಯಪ್ಪ ವೃತ್ತಕ್ಕೆ ಒಂದರ ಹಿಂದೆ ಒಂದರಂತೆ ಆಗಮಿಸಿ ತಮ್ಮ ಮಂಟಪದ ಕತೆಯನ್ನು ದೇವರಮೂರ್ತಿಗಳ ಚಲನವಲನದೊಂದಿಗೆ ತೀರ್ಪುಗಾರರಿಗೆ ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸಿದರು.
ದಶಮಂಟಪಗಳ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ದೇವರಾಜ್, ಖಜಾಂಚಿ ವಿಶ್ವಗಿರಿ, ವಸಂತ, ವಿಮಲ್, ಜನಾರ್ದನ್ ವಸಿಷ್ಠ, ನಾಗೇಶ್, ಪಿ.ಕೆ.ರಘು, ಅಮೃತ್, ರಾಜೀವ್, ಪ್ರಶಾಂತ್ ಇತರರು ಹಾಜರಿದ್ದರು.
ಕುಶಾಲನಗರ ಜನಸ್ನೇಹಿ ಪೊಲೀಸರು ಅದ್ಭುತವಾಗಿ ಬಂದೋಬಸ್ತ್ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಅಗತ್ಯ ಕ್ರಮ ವಹಿಸಿದ್ದರು.
ಸೋಮವಾರ ಕುಶಾಲನಗರ ಪ್ರವೇಶಿಸುವ ಎಲ್ಲ ಪ್ರಮುಖ ರಸ್ತೆಗಳಲ್ಲೂ ತಪಾಸಣಾ ಗೇಟ್ ಮಾಡಿಕೊಂಡು ಜಾಗ್ರತೆ ವಹಿಸಿದ್ದರು. ಡಿವೈಎಸ್ಪಿ ಗಂಗಾಧರಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ರಾಮಾಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ ಮತ್ತು ಮಹಾ ಮಂಗಳಾರತಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ರಾಧಾಕೃಷ್ಣ ನೇತೃತ್ವದಲ್ಲಿ ನಡೆಯಿತು.
ಮಧ್ಯಾಹ್ನ ಸಾವಿರಾರು ಹನುಮ ಭಕ್ತರಿಗೆ ಅನ್ನದಾನವನ್ನು ಡಿ.ಸಿ.ಜಗದೀಶ್ ನೆರವೇರಿಸಿದರು.
ಸಂಜೆ ಶೋಭಾಯಾತ್ರೆಯಲ್ಲಿ ಆಂಜನೇಯನ ಉತ್ಸವ ಮೂರ್ತಿಗೆ ರಸ್ತೆಯಲ್ಲಿ ಭಕ್ತರು ಭಕ್ತಿಯಿಂದ ಪೂಜೆ ಮಾಡಿಸಿ ಈಡುಗಾಯಿ ಒಡೆದರು.
ಆಂಜನೇಯ ಉತ್ಸವಮೂರ್ತಿಗೆ ರಿಜಿಡ್ ಗ್ರೂಪ್ ಸದಸ್ಯರು 1008 ವೀಳ್ಯದೆಲೆ ಮೇಲೆ ಶ್ರೀರಾಮ್ ಎಂದು ಬರೆದು ಬೃಹತ್ ಗಾತ್ರದ ಹಾರ ಮಾಡಿ ಅರ್ಪಿಸಿದರು.
ಚಿತ್ರ ರಮೇಶ್, ಗಾಯತ್ರಿ ಬಾಬು, ಕನ್ನಿಕ ನಾಗ್, ವತ್ಸಲ ಶ್ರೀನಿವಾಸ್, ಹೇಮಾ, ಪ್ರತಿಮಾ, ಚೇತನಾ ಇತರರಿದ್ದರು.

,9545,954 Comments in moderation

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net