

ಹಳೇಬೀಡು: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಶನಿವಾರ ಪಟ್ಟಣದಲ್ಲಿ ಹನುಮ ಜಯಂತಿ ಉತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಹನುಮ ಜಯಂತಿ ಉತ್ಸವದ ಪ್ರಯುಕ್ತ ಹಳೇಬೀಡಿನ ಕೋಟೆ ಆಂಜನೇಯ, ಬೆಣ್ಣೆಗುಡ್ಡದ ವೀರಾಂಜನೇಯ ಹಾಗೂ ಹುಲಿಕೆರೆಯ ಹನುಮಂತ ದೇಗುಲಗಳಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ಕೋಟೆ ಆಂಜನೇಯ ದೇಗುಲದಲ್ಲಿ ಪ್ರಾತಃಕಾಲದಿಂದಲೇ ಮೂಲ ದೇವರಿಗೆ ವಿಪ್ರರ ವೇದಘೋಷದೊಂದಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷವಾಗಿ ಅಲಂಕರ ಮಾಡಲಾಯಿತು. ಬಳಿಕ ಮಹಾನೈವೇದ್ಯ ಹಾಗೂ ಮಹಾಮಂಗಳಾರತಿ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ಜರುಗಿತು. ಬೆಣ್ಣೆಗುಡ್ಡದ ವೀರಾಂಜನೇಯ ದೇವರಿಗೆ ಅಭಿಷೇಕದ ಬಳಿಕ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಎರಡೂ ಕಡೆ ನೂರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ತೀರ್ಥ-ಪ್ರಸಾದ ಸ್ವೀಕರಿಸಿದರು.
ಹುಲಿಕೆರೆ ಗ್ರಾಮದ ಹನುಮಂತ ದೇಗುಲದಿಂದ ಆಂಜನೇಯ ದೇವರ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ರಥದಲ್ಲಿ ಹಳೇಬೀಡಿನ ಕೋಟೆ ಆಂಜನೇಯ ಆಲಯಕ್ಕೆ ಕರೆತರಲಾಯಿತು. ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ ರಥಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಅನಂತರ ಉತ್ಸವಕ್ಕೆ ಚಾಲನೆ ನೀಡಲಾಯಿತು. ಹೂವುಗಳಿಂದ ಸಿಂಗರಿಸಲಾಗಿದ್ದ ಬೆಳ್ಳಿ ರಥದಲ್ಲಿ ಹನುಮ ದೇವರ ಉತ್ಸವ ಮೂರ್ತಿಯನ್ನು ಸ್ಥಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಜೈ ಭಜರಂಗ ಬಲಿ ಎಂಬ ಘೋಷಣೆ ಕೂಗುತ್ತಾ ಉತ್ಸವದ ಕಳೆ ಹೆಚ್ಚಿಸಿದರು. ಅರ್ಚಕ ಕೃಷ್ಣ ಕೋಟೆ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.
ಎಚ್.ಎನ್.ನರಸಿಂಹ ಪ್ರಸಾದ್, ಎಚ್.ಜಿ. ಮಂಜುನಾಥ್, ಎಚ್.ಎ.ರಘುನಾಥ್, ನಾಗರಾಜ್ ಮತ್ತಿತರರಿದ್ದರು.
ಡಿಜೆ ಸದ್ದಿಗೆ ಭರ್ಜರಿಯಾಗಿ ಕುಣಿದ ಹನುಮ ಭಕ್ತರು: ಹನುಮ ಜಯಂತಿ ನಿಮಿತ್ತ ನಡೆದ ಉತ್ಸವದಲ್ಲಿ ಡಿಜೆ ಶಬ್ದಕ್ಕೆ ಹೆಜ್ಜೆ ಹಾಕಿದ ಯುವಕರ ಕುಣಿತ ಹೆಚ್ಚಿನ ಗಮನ ಸೆಳೆಯಿತು. ನೂರಾರು ಸಂಖ್ಯೆಯ ವಿಹಿಂಪ ಹಾಗೂ ಭಜರಂಗದಳದ ಕಾರ್ಯಕರ್ತರು ಡಿಜೆಯಿಂದ ಹೊರಹೊಮ್ಮಜುತ್ತಿದ್ದ ಹಾಡುಗಳಿಗೆ ದಣಿವರಿಯದೆ ಕುಣಿದು ಸಂಭ್ರಮಿಸಿದರು. ಕರಿಯಮ್ಮ ದೇಗುಲ ವೃತ್ತದಿಂದ ಹೊರಟ ಉತ್ಸವ ಮೂರು ಗಂಟೆಗೂ ಅಧಿಕ ಕಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಣ್ಣೆಗುಡ್ಡ ಆಂಜನೇಯ ದೇಗುಲದ ತಪ್ಪಲಿನಲ್ಲಿ ಸಂಪನ್ನವಾಯಿತು. ಮೆರವಣಿಗೆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಸಾವಿರಾರು ಜನರಿಗೆ ಅನ್ನ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಹಳೇಬೀಡು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು. ಉದ್ಯಮಿ ಗ್ರಾನೈಟ್ ರಾಜಶೇಖರ್, ಮುಖಂಡ ಎಚ್.ಅಶೋಕ್, ಎಚ್.ಎಂ.ಗೋವಿಂದಪ್ಪ, ಮಲ್ಲೇಶಪ್ಪ ಮತ್ತಿತರರು ಪಾಲ್ಗೊಂದ್ದರು.