ತುಮಕೂರು: ಹನಿಟ್ರಾ$್ಯಪ್ ಪ್ರಕರಣದ ಬಗ್ಗೆ ಸಿಎಂ, ಗೃಹ ಸಚಿವರಿಗೆ ದೂರು ನೀಡಿದ್ದೇವೆ. ಅವರು ಯಾವ ತನಿಖೆ ಮಾಡುತ್ತಾರೋ ಅವರಿಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಂಗಳವಾರ ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ತನಿಖೆ ನಡುವೆ ನಾನು ಏನು ಮಾತನಾಡುವುದು? ಯಾವ ಸಂಸ್ಥೆಯಿಂದ ಮಾಡುತ್ತಾರೋ ಮಾಡಲಿ, ಎಸ್ಐಟಿ ಮಾಡುತ್ತಾರೋ
ಮತ್ತೊಂದು ಮಾಡುತ್ತಾರೋ ಮಾಡಲಿ ಅದು ಗೃಹ ಮಂತ್ರಿಗಳಿಗೆ, ಸಿಎಂಗೆ ಬಿಟ್ಟ ವಿಚಾರ ಎಂದರು.
ತನಿಖೆ ಹಂತದಲ್ಲಿ ನನಗೆ ನೋಟಿಸ್ ಕೊಟ್ಟರೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುತ್ತೇನೆ. ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ ಎಂದರು. ಪುತ್ರ, ಎಂಎಲ್ಸಿ ರಾಜೇಂದ್ರ ಪ್ರಕರಣವನ್ನು ಅವರನ್ನೇ ಕೇಳಿ ತಿಳಿದುಕೊಳ್ಳಿ ಎಂದು ಪ್ರತಿಕ್ರಿಯಿಸಿದ ರಾಜಣ್ಣ, ಹಂತಕರು ನಡೆಸಿರುವ ಸಂಚಿನ ಬಗ್ಗೆ ಈಗಾಗಲೇ ಆಡಿಯೋ ಕೂಡ ಮಾಧ್ಯಮಗಳಲ್ಲಿಯೇ ಪ್ರಸಾರವಾಗಿದೆ. ಇದರಲ್ಲಿ ಯಾರ ಪ್ರಭಾವ, ಕೈವಾಡವಿದೆಯೋ ನಾನು ಹೇಳಲು ಸಾಧ್ಯವಿಲ್ಲ ಎಂದರು.
ಹನಿಟ್ರಾ$್ಯಪ್, ಕೊಲೆಯಂತಹ ಕಾನೂನು ಬಾಹಿರ ಸಂಚಿಗೆ ಯಾರ ಕುಮ್ಮಕ್ಕಿರಲಿ, ಪ್ರಯತ್ನವಿರಲಿ, ಅಂತಹವರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ. ಬೆಂಗಳೂರಿನವರೊ, ಬಾಂಬೆಯವರೊ ಯಾರಾದರೂ ಇರಲಿ ಇಂತಹ ಸಮಾಜಘಾತುಕರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಇದು ಬೇರೆಯವರಿಗಷ್ಟೇ ಅಲ್ಲ, ನನ್ನನ್ನೂ ಸೇರಿಸಿಕೊಂಡು ಹೇಳುತ್ತಿದ್ದೇನೆ ಎಂದರು.
ನಮ್ಮ ಪಕ್ಷದವರೇ ಆಗಲಿ, ವಿರೋಧ ಪಕ್ಷದವರೇ ಆಗಲಿ ಅಥವಾ ರಾಜಕಾರಣದಲ್ಲಿ ಇಲ್ಲದವರೇ ಇಂತಹ ಹೀನಕೃತ್ಯ ಮಾಡಿರಲಿ ಇದು ಖಂಡನಾರ್ಹ ಎಂದರು.