ತುಮಕೂರು: "ಹನಿ' ಹುಡುಕಿಕೊಂಡು ಹೋದವರು ಟ್ರ್ಯಾಪ್ ಆಗ್ತಾರೆ. ಅದರ ಬಗ್ಗೆ ಹೆಚ್ಚಿಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲಿ ಪ್ರಸ್ತಾಪಿಸಿರುವ ವಿಷಯದ ಬಗ್ಗೆ ವ್ಯಂಗ್ಯವಾಡಿದರು. ಯಾರಾದರೂ ಪ್ರಚೋದಿಸಿದಾಗ ನಾನು ಸುಮ್ಮನಿದ್ದರೆ ಯಾರು ಬಂದು ಟ್ರ್ಯಾಪ್ ಮಾಡ್ತಾರೆ? ಹನಿ ಹುಡುಕಿಕೊಂಡು ಹೋದರೆ ಮಾತ್ರ ಟ್ರ್ಯಾಪ್ ಆಗಲು ಸಾಧ್ಯ. ಅವರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತೆ, ಅವರು ಹೋಗಿ ಪೊಲೀಸರಿಗೆ ದೂರು ಕೊಡಬೇಕು. ಆಗ ತನಿಖೆ ಆಗುತ್ತೆ ಎಂದರು.
ರಾಜ್ಯದಲ್ಲಿ 40ರಿಂದ 50 ಶಾಸಕರ ಹನಿಟ್ರ್ಯಾಪ್ ಆಗಿದೆ ಎಂದರೆ ಅವರಿಗೆ ಗೊತ್ತಿರುತ್ತದೆ. ಅವರೆಲ್ಲರೂ ಪೊಲೀಸರಿಗೆ ಕೂಡಲೇ ದೂರು ಕೊಡಲಿ, ಇಂತಹ ಘಟನೆ ಎಂದೂ ಆಗಬಾರದು. ಅಂತಹವರ ವಿರುದ್ಧ ಕ್ರಮವಾಗಬೇಕು ಎಂದರು.
ಕಾಂಗ್ರೆಸ್ ನಾಯಕರೇ ಸದನದಲ್ಲಿ ಚೀಟಿ ನೀಡಿ ಬಿಜೆಪಿ ಮುಖಂಡರಿಂದ ಹನಿಟ್ರಾ$್ಯಪ್ ವಿಷಯ ಪ್ರಸ್ತಾಪಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್, ಅದು ಕೂಡ ತನಿಖೆಯಾಗಬೇಕು, ಚೀಟಿ ಯಾರು ಯಾರಿಗೆ ಕೊಟ್ಟರು ಎನ್ನೋದು ತನಿಖೆ ಆಗಲಿ. ಈ ಮೂಲಕ ಹನಿಟ್ರ್ಯಾಪ್ ಚಾಳಿ ಅಂತ್ಯವಾಗಬೇಕು ಎಂದರು. ಎಲ್ಲರೂ ಹೋಗಿ ಕೋರ್ಟ್ನಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆಯಾಜ್ಞೆ ತರುತ್ತಾರೆ. ದೆಹಲಿಯಿಂದ ಅವರು ಪೋನ್ನಲ್ಲಿ ಮಾತನಾಡಿದ್ದಾರೆ ಅದಕ್ಕೆ ಇವರು ರೆಸ್ಪಾನ್ಸ್ ಮಾಡಿದ್ದಾರೆ. ಇವರು ಮಾತಾಡಿಲ್ಲ ಎಂದರೆ ಅವರು ಯಾಕೆ ಮಾತಾಡ್ತಾರೆ. ಇಂತಹ ವಿಷಯ ನಿರಂತರ ಪ್ರಚಾರ ಆಗುತ್ತಿವೆ, ಇದೆಲ್ಲ ಅಂತ್ಯವಾಗಬೇಕು ಎಂದರು.
ಬಿಜೆಪಿ ಶಾಸಕ ಮುನಿರತ್ನ ತಲೆ ಕೆಟ್ಟು ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳುತ್ತಿದ್ದಾರೆ. ಅವರ ಮೇಲೆ ಕಂಪ್ಲೆಂಟ್ ಕೂಡ ಆಗಿದೆ. ಮುನಿರತ್ನಗೆ ಬುದ್ಧಿಭ್ರಮಣೆಯಾಗಿ ಡಿಕೆ ಹೆಸರು ಹೇಳ್ತಿದ್ದಾರೆ ಎಂದರು. ರಾಜ್ಯದ ಮುಖ್ಯಮಂತ್ರಿಯಾಗಲು ಆಗಲಿಕ್ಕೆ ಇಂತಹ ಕೆಲಸ ಮಾಡಲು ಆಗುತ್ತದೆಯೇ ಹಾಗೆ ಮಾಡಿದ್ರೆ ಅವರ ವರ್ಚಸ್ಸು ಕಡಿಮೆಯಾಗಲ್ವಾ?. ಸುಮ್ಮನೆ ಡಿ.ಕೆ.ಶಿವಕುಮಾರ್ ವ್ಯಕ್ತಿತ್ವ ಹರಣ ಮಾಡಲು ಹೀಗೆ ಆರೋಪ ಮಾಡುತ್ತಿದ್ದಾರೆ. ಹನಿಟ್ರ್ಯಾಪ್ ವಿಚಾರ ಸದನದಲ್ಲಿ ಪ್ರಸ್ತಾಪ ವಿಚಾರ ಮಾಡಬಾರದಿತ್ತು, ಪ್ರಸ್ತಾಪಕ್ಕೂ ಮುನ್ನ ಮುಖಂಡರಿಗೆ ಅರಿವಿರಬೇಕಿತ್ತು ಎಂದು ರಾಜಣ್ಣಗೆ ತಿವಿದರು.