

ದಾವಣಗೆರೆ: ಕಾಣೆಯಾದ ಪ್ರಕರಣಗಳಲ್ಲಿ ಹದಿಹರೆಯದ ವಯಸ್ಸಿನ ಮಕ್ಕಳೇ ಹೆಚ್ಚಿದ್ದಾರೆ. ಹೀಗಾಗಿ ಸಖಿ-ಒನ್ ಸ್ಟಾಪ್ ಸೆಂಟರ್‌ಗಳ ಕೌನ್ಸಿಲರ್‌ಗಳು ಹಾಗೂ ಶಾಲಾ ಶಿಕ್ಷಕರು ಮಕ್ಕಳಿಗೆ ಅಗತ್ಯ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಖಿ-ಒನ್ ಸ್ಟಾಪ್ ಸೆಂಟರ್‌ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಜತೆ ಭಾವನಾತ್ಮಕ ಒಡನಾಟ ಹೊಂದುವುದು ಅತ್ಯವಶ್ಯಕ. ಶಾಲೆಗಳಲ್ಲಿ ಶಿಕ್ಷಕರು ಪ್ರಮುಖವಾಗಿ 8, 9 ಮತ್ತು 10ನೇ ತರಗತಿಯ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಭಾಗವಹಿಸುವಿಕೆಯನ್ನು ಗಮನಿಸಬೇಕು. ಅನುಮಾನ ಬಂದಲ್ಲಿ ಅವರನ್ನು ಸಂದರ್ಶನಕ್ಕೆ ಒಳಪಡಿಸಿ ಸಮಸ್ಯೆ ತಿಳಿದುಕೊಳ್ಳಬೇಕು ಮತ್ತು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಅತ್ಯಾಚಾರ, ಅಪಹರಣ, ಬಾಲ್ಯವಿವಾಹ, ಸೈಬರ್ ಅಪರಾಧ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಹದಿಹರೆಯದವರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಸಖಿ-ಒನ್ ಸ್ಟಾಪ್ ಸೆಂಟರ್‌ಗಳಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ವೈದ್ಯಕೀಯ, ಕಾನೂನು, ಮಾನಸಿಕ, ಸಾಮಾಜಿಕ ಬೆಂಬಲ ಮತ್ತು ತಾತ್ಕಾಲಿಕ ಆಶ್ರಯ ಸೇವೆಗಳನ್ನು ಒದಗಿಸಬೇಕು.
ಕೌಟುಂಬಿಕ ದೌರ್ಜನ್ಯ, ಶೋಷಣೆಗೆ ಒಳಗಾದ ಮಹಿಳೆಯರು ಬಂದಾಗ ತಕ್ಷಣವೇ ಎಫ್‌ಐಆರ್ ದಾಖಲಿಸದೆ, ಸಂತ್ರಸ್ಥೆ ಹಾಗೂ ಅವರ ಕುಟುಂಬದವರೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಇದು ಸಾಮಾಜಿಕ ಸಮಸ್ಯೆ ಉಂಟುಮಾಡಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ ಜಿಲ್ಲೆಯಲ್ಲಿ ಏಪ್ರಿಲ್ನಿಂದ ಇಲ್ಲಿಯವರೆಗೆ ಮಕ್ಕಳಿಗೆ ಸಂಬಂಧಿಸಿದಂತೆ 61 ಪ್ರಕರಣ, ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿತ 46 ಕೇಸ್ ಸೇರಿ ಒಟ್ಟು 107 ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ನೀಡಿದರು.
ಜಿಪಂ ಉಪಕಾರ್ಯದರ್ಶಿ ಕೃಷ್ಣ್ಣಾನಾಯ್ಕಾ, ಪೊಲೀಸ್ ಅಧಿಕಾರಿ ನೂರ್ ಅಹಮದ್, ಚಿಗಟೇರಿ ಜಿಲ್ಲಾಸ್ಪತ್ರೆ ಅಧೀಕ್ಷಕ
ಡಾ.ಎನ್.ಬಿ.ನಾಗೇಂದ್ರಪ್ಪ, ಮಕ್ಕಳ ರಕ್ಷಣಾ ಘಟಕಾಧಿಕಾರಿ ರಾಜಕುಮಾರ್, ಶುಭೋದಯ ಸೇವಾ ಸಂಸ್ಥೆ ಕಾರ್ಯದರ್ಶಿ ಎಚ್.ಬಿ.ಕುಮಾರ್ ಇದ್ದರು.
----