ಹದಗೆಟ್ಟಿದೆ ರಾಮಾಪುರ-ಮೀಣ್ಯಂ ರಸ್ತೆ

Published on

ಹನೂರು: ಹಳ್ಳ ಬಿದ್ದ ರಸ್ತೆ, ಕಲ್ಲು ಮುಳ್ಳಿನ ಹಾದಿ, ವಾಹನ ಸಂಚರಿಸಿದರೆ ಧೂಳೋ ಧೂಳು, ಇಂಥ ದುರ್ಗಮ ರಸ್ತೆಯಲ್ಲಿ ನಡೆದಾಡಿದರೆ ನರಕ ದರ್ಶನ ಗ್ಯಾರಂಟಿ. ಇದು ರಾಮಾಪುರದ ಮೂಲಕ ಮೀಣ್ಯಂಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ರಸ್ತೆೆ ದುಸ್ಥಿತಿ..

ಈ ರಸ್ತೆ ಹಲವು ವರ್ಷಗಳಿಂದಲೂ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಹಾಗಾಗಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಾಮಾಪುರ ಗ್ರಾಮ ಹೋಬಳಿ ಕೇಂದ್ರ ಸ್ಥಾನವಾಗಿದೆ. ಮೀಣ್ಯಂ ಗ್ರಾಮಕ್ಕೆ 27 ಕಿ.ಮೀ. ಅಂತರದಲ್ಲಿದೆ. ಅರಣ್ಯ ಪ್ರದೇಶದ ಮೂಲಕ ಈ ಮಾರ್ಗ ಹಾದು ಹೋಗಿದೆ. ಕೂತಗುಳಿ, ಸಾಹೇಬರದೊಡ್ಡಿ, ಗೊಲ್ಲರದಿಂಬ, ದಿನ್ನಳ್ಳಿ, ಸತ್ಯಮಂಗಲ, ಗಾಜನೂರು, ಕೊಪ್ಪ ಸೇರಿ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಜತೆಗೆ ಹೂಗ್ಯಂ ಭಾಗದ ಜನರೂ ಈ ಮಾರ್ಗದಲ್ಲೇ ತೆರಳಬೇಕಿದೆ. ರಾಮಾಪುರಕ್ಕೆ ಹೋಗುವ ಶಾಲೆ-ಕಾಲೇಜಿನ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ತೆರಳುವ ಜನರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. 27 ಕಿ.ಮೀ. ಇರುವ ಈ ಮಣ್ಣಿನ ರಸ್ತೆ ಹಲವು ವರ್ಷಗಳಿಂದ ಇದೇ ದುಸ್ಥಿತಿಯಲ್ಲಿದೆ. ಹದಗೆಟ್ಟ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿ ಸಾವು, ನೋವುಗಳಾಗಿದೆ. ಜತೆಗೆ ಜಲ್ಲಿಕಲ್ಲುಗಳು ಹಾಗೂ ಗುಂಡಿಗಳಿಗೆ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಯೂ ನಡೆದಿದೆ. ಇದು ರಾಮಾಪುರಕ್ಕೆ ತೆರಳುವ ದಾರಿಯೋ ಅಥವಾ ಯಮಪುರಿಗೆ ಸಾಗುವ ಮಾರ್ಗವೋ ಎಂಬುದು ಈ ಭಾಗದ ಜನರ ಪ್ರಶ್ನೆಯಾಗಿದೆ.

ಸಂಚರಿಸುವುದೇ ದೊಡ್ಡ ಸವಾಲು:

ರಸ್ತೆ ಅಭಿವೃದ್ಧಿಪಡಿಸಲು ಹಲವು ವರ್ಷಗಳಿಂದ ಸಾರ್ವಜನಿಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಜತೆಗೆ ಜನಪ್ರತಿನಿಧಿಗಳು ಈ ಭಾಗಕ್ಕೆ ಆಗಮಿಸಿದ್ದ ವೇಳೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಅನುದಾನದ ಕೊರತೆಯಿಂದ ಈವರೆಗೂ ಈ ರಸ್ತೆಗೆ ಅಭಿವೃದ್ಧಿಯ ಭಾಗ್ಯ ಸಿಕ್ಕಿಲ್ಲ.

ಕಳೆದ 2 ಅವಧಿಯಲ್ಲಿ ಶಾಸಕ ಆರ್.ನರೇಂದ್ರ ಸರ್ಕಾರದಿಂದ ಅನುದಾನ ತಂದು ರಸ್ತೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿದ್ದರು. ಇದರಿಂದ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಸತ್ಯಮಂಗಲದಿಂದ ಮೀಣ್ಯಂ ಸಮೀಪದವರೆಗೆ ಸುಮಾರು 5 ಕಿ.ಮೀ. ರಸ್ತೆಯನ್ನು ಹಾಗೆಯೇ ಬಿಡಲಾಗಿದೆ. ಇದೀಗ ಮತ್ತಷ್ಟು ಹದಗೆಟ್ಟು, ಹಳ್ಳಕೊಳ್ಳದ ರಸ್ತೆಯಾಗಿ ಮಾರ್ಪಟ್ಟಿದೆ. ಇದರಿಂದ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಬಹುತೇಕ ಎಲ್ಲರೂ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಹಾಗಾಗಿ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ವಾಹನ ಕೈ ಕೊಟ್ಟರೆ ದೇವರೇ ಗತಿ:

ಸತ್ಯಮಂಗಲದಿಂದ ಮೀಣ್ಯಂವರೆಗೆ ಕಳೆದ ಹಲವು ದಶಕದಿಂದಲೂ ಹದಗೆಟ್ಟಿರುವ ರಸ್ತೆಯಲ್ಲಿ ಸಾಗುವುದು ಎಂದರೆ ಅದು ಯಮಯಾತನೆಯಾಗಿದೆ. ಮಣ್ಣಿನ ರಸ್ತೆಯು ಹಳ್ಳ-ಕೊಳ್ಳಗಳ ರಸ್ತೆಯಾಗಿ ಮಾರ್ಪಟ್ಟಿದೆ. ಬೈಕ್ ಸವಾರರು ಸಂಚರಿಸುವ ಪರಿಯಂತೂ ಹೇಳತೀರದಾಗಿದೆ. ಮಳೆಗಾಲದ ವೇಳೆಯಲ್ಲಂತೂ ಈ ರಸ್ತೆಯಲ್ಲಿ ಸಂಚರಿಸಬೇಕು ಎಂದರೆ ಎಂಟೆದೆ ಬೇಕು. ವಾಹನ ಸವಾರರನ್ನು ದೇವರೇ ಕಾಪಾಡಬೇಕು. ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಬೇಕಾದರೆ ಜನರು ಪಡಬಾರದ ಕಷ್ಟಪಡುತ್ತಿದ್ದಾರೆ. ಜತೆಗೆ ಇದು ಅರಣ್ಯ ಪ್ರದೇಶದ ರಸ್ತೆಯಾಗಿರುವುದರಿಂದ ವನ್ಯಜೀವಿಗಳ ಭಯವೂ ಕೂಡ ಇದೆ. ಕೆಲವೊಮ್ಮೆ ವನ್ಯಪ್ರಾಣಿಗಳು ವಾಹನ ಸವಾರರನ್ನು

ಬೆನ್ನಟ್ಟಿ ಬಂದಿರುವ ಘಟನೆಗಳೂ ನಡೆದಿದೆ. ಈ ಮಾರ್ಗದಲ್ಲಿ ವಾಹನ ಕೆಟ್ಟು ನಿಂತರೆ ವಿಧಿಯಿಲ್ಲದೇ ಅಲ್ಲಿಯೇ ಬಿಟ್ಟು ಬರಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ರಸ್ತೆ ಅಭಿವೃದ್ಧಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅನುದಾನ ನೀಡುವಂತೆ ಒತ್ತಾಯ: ಹದಗೆಟ್ಟಿರುವ ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದರಲ್ಲಿ ಈ ರಸ್ತೆಯೂ ಸೇರಿದೆ. ಫೆ.15 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಾದರೂ ಈ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಮತ್ತು ಸಚಿವರು ಅನುದಾನ ಮಂಜೂರು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಮಾಪುರ-ಮೀಣ್ಯಂ ಮಾರ್ಗದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ಸಂಚರಿಸಲು ನರಕಯಾತನೆ ಅನುಭವಿಸುತ್ತಿದ್ದೇವೆ. ರಾತ್ರಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಾದರೆ ಪಡಬಾರದ ಕಷ್ಟಪಡಬೇಕಿದೆ. ಕಾಡು ಪ್ರಾಣಿಗಳು ಬೈಕ್ ಸವಾರರನ್ನು ಹಿಮ್ಮೆಟ್ಟಿಸಿದ ಪ್ರಕರಣ ಅನೇಕ ಇವೆ. ಈ ವೇಳೆ ಹಲವರು ವಾಹನಗಳಿಂದ ಬಿದ್ದು ಗಾಯಗೊಂಡಿರುವ ಘಟನೆಗಳೂ ಸಂಭವಿಸಿವೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಈ ಹದಗೆಟ್ಟ ರಸ್ತೆಗೆ ಮುಕ್ತಿ ದೊರಕಿಸಿಕೊಡಬೇಕಿದೆ. ಬಸವಣ್ಣ ಗ್ರಾಮಸ್ಥ, ಮೀಣ್ಯಂ ಗ್ರಾಮ ಮೀಣ್ಯಂ ಭಾಗದಲ್ಲಿ 5 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರ ಅಭಿವೃದ್ಧಿಗಾಗಿ ಅಗತ್ಯ ಕ್ರಮ ವಹಿಸಲಾಗಿದೆ. ಅನುದಾನ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುದಾನ ದೊರಕುವ ನಿರೀಕ್ಷೆ ಇದೆ. ಚಿನ್ನಣ್ಣ ಎಇಇ, ಲೋಕೋಪಯೋಗಿ ಇಲಾಖೆ, ಮಹದೇಶ್ವರಬೆಟ್ಟ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net