ಹದಗೆಟ್ಟ ಸೊರಬ ತಾಲೂಕು ಆಡಳಿತ

16sor2
Published on

ಸೊರಬ: ಅಧಿಕಾರಿಗಳಲ್ಲಿ ಜತೆ ಹೊಂದಾಣಿಕೆ ಇಲ್ಲದೆ ಸೊರಬ ತಾಲೂಕು ಆಡಳಿತ ಸಂಪೂರ್ಣ ಹದಗೆಟ್ಟಿದ್ದು ಜನ ಸಾಮಾನ್ಯರ ಬದುಕು ಬೀದಿ ಪಾಲಾಗುತ್ತಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.

ಭಾನá-ವಾರ ಕುಬಟೂರು ಗ್ರಾಮದ ನಿವಾಸದಲ್ಲಿ ಮುಖಂಡರ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಕರೊನಾ ವೇಳೆ ಘೊಷಣೆ ಮಾಡಿದ ಪ್ಯಾಕೇಜ್ ಇನ್ನೂ ತಲುಪಿಲ್ಲ. ತಾಲೂಕಿನಲ್ಲಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೂ ಕೇಳುವವರು ಇಲ್ಲದಂತಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನ ಅವರು ಬಗರ್​ಹುಕುಂ ಕಾಯ್ದೆ ಜಾರಿಗೆ ತಂದಿದ್ದರಿಂದ ಇಂದು ಸಾವಿರಾರು ರೈತರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ತಾಲೂಕಿನ ಶಾಸಕರು ರೈತರನ್ನು ಒಕ್ಕಲೆಬ್ಬಿಸುವ ಹಾಗೂ ಪಟ್ಟಣದ ಸರ್ವೆ ನಂ.113 ರಲ್ಲಿ ಮನೆ ಕಟ್ಟಿಕೊಂಡಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ದೂರಿದರು.

ಪಟ್ಟಣದ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ವೈದ್ಯರನ್ನು ವೈದ್ಯಕೀಯ ಕೆಲಸ ಮಾಡಲು ಬಿಡಬೇಕು. ರಾಜಕಾರಣ ಮಾಡಿ ಒಳ್ಳೆಯ ವೈದ್ಯರನ್ನು ಇಲ್ಲಿಂದ ಎತ್ತಂಗಡಿ ಮಾಡಿಸುವುದು ಸರಿಯಲ್ಲ. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಒಂದು ವೇಳೆ ಹೊಂದಾಣಿಕೆ ಸಂದರ್ಭ ಬಂದರೆ ಬಿಜೆಪಿಯೇತರ ಪಕ್ಷಗಳ ನಡುವೆ ಹೊಂದಾಣಿಕೆ ನಡೆಯಬಹುದು ಎಂದರು.

ಸೊರಬ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಕೆ.ಪಿ.ರುದ್ರಗೌಡ, ಎಪಿಎಂಸಿ ಅಧ್ಯಕ್ಷ ಜಯಶೀಲಪ್ಪ, ಮಾಜಿ ಅಧ್ಯಕ್ಷ ಎಲ್.ಜಿ.ರಾಜಶೇಖರ್, ಜಿಪಂ ಸದಸ್ಯರಾದ ವೀರೇಶ್ ಕೊಟಗಿ, ಶಿವಲಿಂಗೇಗೌಡ್ರು, ಶಿವಕುಮಾರ್, ಸಂಜೀವ್ ಇತರರು ಇದ್ದರು.

ಒಕ್ಕಲೆಬ್ಬಿಸಲು ನಾನು ಬಿಡುವುದಿಲ್ಲ: ಬಗರ್​ಹá-ಕುಂ ಹಾಗೂ ಸರ್ವೆ ನಂ.113ರಲ್ಲಿ ಮನೆ ಕಟ್ಟಿಕೊಂಡವರನ್ನು ಒಕ್ಕಲೆಬ್ಬಿಸಲು ನಾನು ಬಿಡುವುದಿಲ್ಲ. ನಾನು ಶಾಸಕನಾದಾಗ ಸಾವಿರಾರು ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಇವರನ್ನು ಒಕ್ಕಲೆಬ್ಬಿಸಲು ಮುಂದಾದರೆ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ತಿಳಿಸಿದರು. ಕರೊನಾ ಹಿನ್ನಲೆಯಲ್ಲಿ ಹಳ್ಳಿಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಗಣಪತಿ ಹಬ್ಬದ ಬಳಿಕ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜನರ ಸಮಸ್ಯೆ ಅರಿತು ಪರಿಹಾರಕ್ಕಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ನಷ್ಟಕ್ಕೆ ಹೊಣೆ ಯಾರು? ಜೋಗದ ಶರಾವತಿ ವಿದ್ಯುದಾಗಾರದಲ್ಲಿ ಪ್ರತಿನಿತ್ಯ 1 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಕೇವಲ 800 ಮೆಗಾವ್ಯಾಟ್ ಮಾತ್ರ ಬಳಕೆಯಾಗುತ್ತಿದೆ. ಕರೊನಾ ಕಾರಣ ನೀಡಿ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದ್ದರಿಂದ ಸಣ್ಣ, ದೊಡ್ಡ ಉದ್ಯಮ ಹಾಗೂ ಕೈಗಾರಿಕೆಗಳು ಉತ್ಪಾದನೆ ನಿಲ್ಲಿಸಿದ್ದರಿಂದ ಉತ್ಪದನೆಯಾದ ವಿದ್ಯುತ್ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದರಿಂದ ಸುಮಾರು 20 ಕೋಟಿ ರೂ. ನಷ್ಟು ನಷ್ಟವಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net