

ಮುಂಡರಗಿ: ತಾಲೂಕಿನ ಜಾಲವಾಡಗಿ ಗ್ರಾಮದಿಂದ ಹಮ್ಮಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 8 ಕಿ.ಮೀ. ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯು ಮತ್ತಷ್ಟು ಹಾಳಾಗಿದ್ದು ಬರೀ ತಗ್ಗು ಗುಂಡಿಗಳು ನಿರ್ವಣವಾಗಿವೆ.
ಪ್ರತಿದಿನ ಈ ಮಾರ್ಗವಾಗಿ ಬಾಗೇವಾಡಿ, ಜಾಲವಾಡಗಿ, ಹಮ್ಮಿಗಿ ಮೊದಲಾದ ಗ್ರಾಮಸ್ಥರು ಸಂಚರಿಸುತ್ತಾರೆ. ಸಾರಿಗೆ ಸಂಸ್ಥೆಯ ಬಸ್ಗಳು ಸಹ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವಾಗ ಕೆಲವು ಸಲ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಈ ಮಾರ್ಗವಾಗಿ ಮರಳು ತುಂಬಿದ ವಾಹನಗಳು ಸಂಚರಿಸುವುದರ ಜತೆಗೆ ಸತತವಾಗಿ ಸುರಿದ ಮಳೆ ಹಾಗೂ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಹಾಳಾಗಿದೆ ಎನ್ನುವುದು ಈ ಭಾಗದ ಗ್ರಾಮಸ್ಥರ ಆರೋಪವಾಗಿದೆ.
ಮರಳು ತುಂಬಿದ ವಾಹನಗಳು ಈ ಮಾರ್ಗದಲ್ಲಿ ಸಂಚರಿಸದಂತೆ ಕ್ರಮ ಕೈಗೊಳ್ಳಬೇಕು. ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು ಎಂದು ಹಮ್ಮಿಗಿ ಗ್ರಾಮದ ಈರಣ್ಣ ಮದ್ದಿನ್, ಚನ್ನವೀರಪ್ಪ ಎಲಿಗಾರ ಹಾಗೂ ಜಾಲವಾಡಗಿ ಗ್ರಾಮದ ಮಲ್ಲಿಕಾರ್ಜುನ ಹಣಜಿ, ವೀರನಗೌಡ ಪಾಟೀಲ, ಬಸವರಾಜ ಡಂಬಳಮಠ, ಹನುಮಂತಪ್ಪ ಚೂರಿ ವೀರಭದ್ರಪ್ಪ ಬೆಟ್ಟಣವರ ಇತರರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಟ್ಟಣದ ಪಂಚಾಯತ್ರಾಜ್ ಇಂಜಿನಿಯರ್ ಉಪವಿಭಾಗದ ಎಇಇ ರಮೇಶ ಡಿ ಅವರು, ‘ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ಭಾರಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.