ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಿ

Published on

ಹನೂರು: ಪಟ್ಟಣದಿಂದ ಚಿಂಚಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ಅದನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದಿಂದ ಹನೂರಿಗೆ ಸುಮಾರು 6 ಕಿ.ಮೀ. ಅಂತರ ಹೊಂದಿದ್ದು, ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಎರಡು ವರ್ಷಗಳ ಹಿಂದೆ 1 ಕಿ.ಮೀ. ರಸ್ತೆಯನ್ನು ಮಾತ್ರ ಡಾಂಬರೀಕರಣಗೊಳಿಸಲಾಗಿದೆ. ಆದರೆ, ಇನ್ನುಳಿದ 5 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ. ಇದರಿಂದ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಜಲ್ಲಿಕಲ್ಲುಗಳ ರಸ್ತೆ ತುಂಬ ಹರಡಿಕೊಂಡಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಆಯಾ ತಪ್ಪಿ ಬಿದ್ದು ಕೈ-ಕಾಲು ಮುರಿದುಕೊಂಡಿರುವ ಸಾಕಷ್ಟು ಉದಾಹರಣೆಗಳು ಇವೆ. ಬೃಹತ್ ವಾಹನಗಳು ಚಲಿಸುವಾಗ ಕಲ್ಲುಗಳು ಸಿಡಿದು ಪಕ್ಕದ ವಾಹನಕ್ಕೆ ಒಡೆಯುತ್ತವೆ. ಸವಾರರು ರಸ್ತೆಯನ್ನು ಬಿಟ್ಟು ಬದಿಯಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ದುಸ್ಸಾಹಾಸವಾಗಿದೆ. ಇದರಿಂದ ಕೆಲವರು ಎಡಳ್ಳಿದೊಡ್ಡಿ ಗ್ರಾಮದ ಮೂಲಕ ಸುತ್ತಿಕೊಂಡು ಹನೂರಿಗೆ ತೆರಳುವಂತಾಗಿದೆ. ಹಾಗಾಗಿ, ಬಾಕಿ ಉಳಿದಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಹದಗೆಟ್ಟಿರುವ ರಸ್ತೆಯನ್ನು ರಿಪೇರಿ ಮಾಡಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net