ಹದಗೆಟ್ಟ ರಸ್ತೆಗೆ ಪಿಡಬ್ಲುಡಿ ತೇಪೆ

29 kem 2
Published on

ಹದಗೆಟ್ಟ ರಸ್ತೆಗೆ ಪಿಡಬ್ಲುಡಿ ತೇಪೆ

ಕೆಂಭಾವಿ: ಸAಪೂರ್ಣ ಹದಗೆಟ್ಟ ಕೆಂಭಾವಿ-ಮಲ್ಲಾ ರಸ್ತೆಗೆ ಶನಿವಾರ ಲೋಕೋಪಯೋಗಿ ಇಲಾಖೆ ತೇಪೆ ಹಚ್ಚುವ ಮೂಲಕ ಜನರನ್ನು ಸಮಾಧಾನಪಡಿಸಲು ಮುಂದಾಗಿದೆ.

೧೦ ಕಿಮೀ ರಸ್ತೆ ಸಾಗಬೇಕಾದರೆ ವಾಹನಗಳಿಗೆ ಒಂದು ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತಿದ್ದು, ಮರ‍್ನಾಲ್ಕು ತಿಂಗಳ ಹಿಂದೆ ಕೇವಲ ನಾಲ್ಕು ಕಿಮೀ ರಸ್ತೆ ಅಭಿವೃದ್ಧಿ ಕಂಡಿತ್ತು. ಇನ್ನುಳಿದ ಆರು ಕಿಮೀ ರಸ್ತೆಯಲ್ಲಿ ಬಸ್ ಇತರ ವಾಹನಗಳಲ್ಲಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತವರು ಮನೆ ಎಂದೇ ಕರೆಸಿಕೊಳ್ಳುವ ಈ ಪಟ್ಟಣದ ಮುಖ್ಯ ರಸ್ತೆ ಅಧೋಗತಿ ಬಗ್ಗೆ ಪತ್ರಿಕೆ ಸರಣಿ ಸುದ್ದಿ ಪ್ರಕಟಿಸಿದೆ. ಈ ಹಿಂದೆ ಪ್ರತಿ ಸೋಮವಾರ ಜನರ ಕುಂದುಕೊರತೆ ನಿವಾರಿಸಲು ಸಚಿವರು ಬರುತ್ತಿದ್ದಾಗ ಈ ರಸ್ತೆ ಗುಂಡಿಗಳು ಕಾಣಲಿಲ್ಲವೇ? ಕಾಮಗಾರಿಗೆ ಟೆಂಡರ್ ಆಗಿದ್ದರೂ ಅಧಿಕಾರಿಗಳು ಕೇವಲ ಗುಂಡಿ ಮುಚ್ಚುವ ಮೂಲಕ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆಯೇ ಎಂಬಿತ್ಯಾದಿ ಪ್ರಶ್ನೆಗಳು ಸ್ಥಳೀಯರನ್ನು ಕಾಡುತ್ತಿವೆ.

ಪಕ್ಕದ ಜಾಲಿಗಿಡಗಳನ್ನು ಜೆಸಿಬಿ ಮೂಲಕ ಅಗೆದು ಅಲ್ಲಿದ್ದ ಮಣ್ಣಿನಿಂದ ಮುಖ್ಯ ರಸ್ತೆ ಗುಂಡಿ ಮುಚ್ಚಿಸುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಮಳೆಗಾಲದಲ್ಲಿ ಶಾಶ್ವತ ಉಳಿಯುವುದೇ ಎಂಬ ಅನುಮಾನ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ರಸ್ತೆ ಸಂಪೂರ್ಣ ಬಂದ್ ಆಗುವ ಲಕ್ಷಣ ಗೋಚರಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net