ಹದಗೆಟ್ಟ ರಸ್ತೆಗಳು-ಜನತೆ ಹೈರಾಣ

Deteriorated roads-People are frustrated
ಇಂಡಿ: ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ 548 ರ ಚಿತ್ರ.
Published on

ವಿಜಯಪುರ: ಮಳೆ ಹಾಗೂ ವಾಹನಗಳ ದಟ್ಟಣೆಯಿಂದಾಗಿ ಇಂಡಿ ತಾಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಈ ಬಗ್ಗೆ ಪದೇ ಪದೇ ಸದನದಲ್ಲಿ ಪ್ರಶ್ನಿಸುತ್ತಿರುವ ಶಾಸಕ ಯಶವಂತಾಯಗೌಡ ಪಾಟೀಲರಿಗೆ ಸಮಾಧಾನಕರ ಉತ್ತರ ಸಿಗುತ್ತಿದೆ ವಿನಃ ಅನುದಾನ ಮಾತ್ರ ಲಭ್ಯವಾದಂತಿಲ್ಲ !
ಹೌದು, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಹದಗೆಟ್ಟ ರಸ್ತೆಗಳ ಬಗ್ಗೆ ಶಾಸಕರು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದರು. ಇದೀಗ ಜುಲೈ-2023ರಲ್ಲಿ ನಡೆದ ಮೊದಲ ಅಧಿವೇಶನದಲ್ಲಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳ ಭರಾಟೆಯಲ್ಲಿ ಅನುದಾನ ಸಿಗಲಿದೆಯಾ? ಸಿಕ್ಕರೆ ಯಾವಾಗ? ರಸ್ತೆಗಳು ಸುಧಾರಿಸುವುದು ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಇಂಡಿ ತಾಲೂಕಿನಲ್ಲಿ 106 ಗ್ರಾಮೀಣ ರಸ್ತೆಗಳಿವೆ. ಬಹುತೇಕ ರಸ್ತೆಗಳು ಹಾಳಾಗಿವೆ. ಮುಖ್ಯ ರಸ್ತೆಗಳ ಸ್ಥಿತಿ ಒಂದೆಡೆಯಾದರೆ ಗ್ರಾಮೀಣ ರಸ್ತೆಗಳ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ರೂಗಿ-ಹಿರೇಮಸಳಿ, ತಾಂಬಾ-ಹಿರೇಮಸಳಿ, ಸಂಗೋಗಿ-ಶಿರಶ್ಯಾಡ ಮೂಲಕ ಆಲಮೇಲ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸೇರಿದಂತೆ ಹಲವು ರಸ್ತೆಗಳು ಹಾಳಾಗಿದ್ದು, ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ. ಮಳೆಯಿಂದಾಗಿ ತಗ್ಗು ಗುಂಡಿ ನಿರ್ಮಾಣವಾಗಿದ್ದು ವ್ಯವಸ್ಥೆಯನ್ನು ಅಣಕಿಸುತ್ತಿವೆ. ಒಂದು ಕಿಮೀ ರಸ್ತೆ ಕ್ರಮಿಸಲು ಕನಿಷ್ಠ 20-30 ನಿಮಿಷ ತಗಲುತ್ತಿದೆ. ಇದು ಜನರ ಸಹನೆ ಪರೀಕ್ಷಿಸುವಂತಾಗಿದೆ.

ಡಾಂಬರೀಕರಣ ರಸ್ತೆ -232.80 ಕಿಮೀ, ಖಡೀಕರಣ ರಸ್ತೆ-126.09 ಹಾಗೂ ಮುರಮ ರಸ್ತೆ-255.02 ಕಿಮೀ ಹಾಳಾಗಿದ್ದು ಒಟ್ಟು 613.91 ಕಿಮೀ ರಸ್ತೆ ಹಾಳಾಗಿದೆ. ಈ ರಸ್ತೆ ಸುಧಾರಣೆಗೆ ಒಟ್ಟು 1207.00 ಲಕ್ಷ ರೂ.ಅನುದಾನದ ಅವಶ್ಯಕತೆ ಇದೆ. 2022-23ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 5054ರಡಿ ರೂ. 5 ಕೋಟಿ ಹಾಗೂ ಮಳೆ ಪರಿಹಾರ ಕಾರ್ಯಕ್ರಮದಡಿ ರೂ.4.4975 ಕೋಟಿ ಮಂಜೂರು ಮಾಡಲಾಗಿದೆ. ಲೆಕ್ಕ ಶೀರ್ಷಿಕೆ 3054 ಲಿಂಕ್ ಡಾಕ್ಯೂಮೆಂಟ್ ರಸ್ತೆಗಳ ನಿರ್ವಹಣೆಗೆ ರೂ.1.083 ಕೋಟಿ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಲೆಕ್ಕ ಶೀರ್ಷಿಕೆ 3054 ಟಾಸ್ಕ್‌ಫೋರ್ಸ್ ಕಾರ್ಯಕ್ರಮದಡಿ ರೂ.1.083 ಕೋಟಿ ಮಂಜೂರು ಮಾಡಲಾಗಿದೆ. ಅನುದಾನದ ಲಭ್ಯತೆ ಆಧರಿಸಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉತ್ತರವೇನೋ ನೀಡಿದ್ದಾರೆ. ಆದರೆ, ಆ ಅನುದಾನ ಬರುವುದು ಯಾವಾಗ? ರಸ್ತೆ ಅಭಿವೃದ್ಧಿ ಕೈಗೊಳ್ಳುವುದು ಇನ್ಯಾವಾಗ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ 548 ರ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾರ್ಯಾದೇಶಕ್ಕಾಗಿ ಕಾಯುತ್ತಿದ್ದೇವೆ. ಕಾರ್ಯಾದೇಶವಾಗುತ್ತಿದ್ದಂತೆ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು.
ವಿವೇಕ ಮಠ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಅಭಿಯಂತರ
ಹದಗೆಟ್ಟ ರಸ್ತೆಯಿಂದ ಬಹುತೇಕ ವಾಹನಗಳು ರಿಪೇರಿಗೆ ಬರುತ್ತಿವೆ. ಟಾಯರ್ ಹಾಳಾಗುತ್ತಿವೆ. ಸಂಬಂಧಿಸಿದವರು ಕೂಡಲೆ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ರಸ್ತೆ ಮೇಲ್ದರ್ಜೆಗೇರಿಸಿದ್ದು ಒಳ್ಳೆಯದು. ಆದರೆ, ಹದಗೆಟ್ಟ ರಸ್ತೆಯನ್ನು ಸುಧಾರಿಸಬೇಕು. ಇಲಾಖೆ ಕೂಡಲೇ ಕಾರ್ಯಪ್ರವೃತ್ತವಾಗಬೇಕು.
ಭೀಮಾಶಂಕರ ಆಳೂರ, ಗ್ರಾಪಂ ಉಪಾಧ್ಯಕ್ಷ, ಅಗರಖೇಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net