ಹದಗೆಟ್ಟ ರಸ್ತೆ, ಸಂಚಾರ ಸ್ಥಗಿತ

1209Aland1
Published on

ಶಿವಲಿಂಗ ತೇಲ್ಕರ್ ಆಳಂದ:
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಧಂಗಾಪುರ- ಕಡಗಂಚಿ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗುಗಳಿಂದ ಕೂಡಿದ ರಸ್ತೆಯಲ್ಲಿ ಸಂಚಾರ ಹೈರಾಣವಾಗಿದೆ.
ಧಂಗಾಪುರ ಗ್ರಾಮದ ಜನತೆ ವ್ಯಾಪಾರ, ವಹಿವಾಟು, ಶಿಕ್ಷಣ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಜಿಲ್ಲಾ ಕೇಂದ್ರಕ್ಕೆ ಕಡಗಂಚಿ ಮಾರ್ಗವಾಗಿ ಬರುತ್ತಿದ್ದರು. ಇಲ್ಲಿಂದ ಕಲಬುರಗಿ 40 ಕಿಮೀ ಆಗುತ್ತಿತ್ತು. ಕಳೆದ 2 ವರ್ಷಗಳ ಹಿಂದೆ ರಸ್ತೆ ಮಾಡಿದ್ದು, ಇದೀಗ ಮಳೆಯಿಂದ ಹಳ್ಳದ ನೀರು ಹರಿದು ಅರ್ಧ ಕಿಮೀ. ರೋಡ್ ಹಾಳಾಗಿದೆ. ಇದರಿಂದ ಬಸ್ಗಳು ಸೇರಿ ಎಲ್ಲ ತರಹದ ಸಂಚಾರ ಸ್ಥಗಿತಗೊಂಡಿದೆ.
ನಿರಂತರ ಮಳೆಯಿಂದ ತೇವಾಂಶ ಹೆಚ್ಚಾಗಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿವೆ. ರೋಡ್ ತುಂಬೆಲ್ಲ ಎರೆ ಮಣ್ಣು ಇರುವುದರಿಂದ ದ್ವಿಚಕ್ರ ಸೇರಿ ಯಾವ ವಾಹನಗಳು ಸಂಚರಿಸದಂತಾಗಿದೆ. ಇದರಿಂದ ಧಂಗಾಪುರದ ಜನತೆ ನಿಂಬರ್ಗಾ - ವೈಜಾಪುರ- ಬೊಮ್ನಳ್ಳಿ ಮಾರ್ಗವಾಗಿ 52 ಕಿಮೀ. ಸಂಚರಿಸಿ ಕಲಬುರಗಿಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಸಣ್ಣ ನಾಲಾಗಳಿದ್ದು, ಅವುಗಳಿಗೆ ಅಪಾರ ಪ್ರಮಾಣದ ನೀರು ಬಂದಿದ್ದರಿಂದ, ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಅರ್ಧ ಕಿಮೀ ಹೊರತು ಪಡಿಸಿದರೆ ಮುಂದಿನ ರಸ್ತೆ ಉತ್ತಮವಾಗಿದೆ. ಆದರೆ ಈ ಕೆಟ್ಟ ರೋಡ್ ದಾಟುವುದೇ ಸಾಹಸದ ಕೆಲವಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಸಮಸ್ಯೆ ಹೇಳಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ತಹಸೀಲ್ದಾರ್ ಹಾಗೂ ಶಾಸಕರು ಇತ್ತ ಗಮನಹರಿಸಿ ಸಂಪೂರ್ಣ ಹದಗೆಟ್ಟ ರಸ್ತೆ ದುರಸ್ತಿಗೆ ಮುಂದಾಗಬೇಕಿದೆ. ಈ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಒಕ್ಕೊರಲ ಒತ್ತಾಯವಾಗಿದೆ.

ಮಳೆಯಿಂದ ತಾಲೂಕಿನಲ್ಲಿ ಸಾಕಷ್ಟು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿತ್ತು. ರಸ್ತೆ ಸರಿಪಡಿಸಿ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಧಂಗಾಪುರ- ಕಡಗಂಚಿ ಮಧ್ಯೆ ರಸ್ತೆ ಹಾಳಾಗಿದೆ. ಅಲ್ಲದೆ ರಸ್ತೆ ಬದಿಯಲ್ಲಿ ಮುಳ್ಳು- ಕಂಟಿಗಳು ಬೆಳೆದಿವೆ. ಈಗಾಗಲೇ ಸ್ಥಳೀಯ ಡಿಪೋ ಅವರು ಬಸ್ಗಳ ಸಂಚಾರ ಸ್ಥಗಿತಗೊಳಿಸಿದ್ದಾರೆ. ಜನರಿಗೆ ಸಮಸ್ಯೆ ಆಗುತ್ತಿದ್ದು, ಅಧಿಕಾರಿಗಳು ಗಮನಹರಿಸಿ ಕೂಡಲೇ ಉತ್ತಮ ರಸ್ತೆ ನಿಮರ್ಾಣಕ್ಕೆ ಮುಂದಾಗಬೇಕು.| ಡಾ.ಸಿದ್ರಾಮಪ್ಪ ಪಾಟೀಲ್ ಧಂಗಾಪೂರ, ಜಿಲ್ಲಾಧ್ಯಕ್ಷ, ಕೃಷಿಕ ಸಮಾಜ, ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net