

ಮುರಗೋಡ: ಮುರಗೋಡ ಸೇರಿ ಸುತ್ತಲಿನ ಸೊಗಲ, ತಲ್ಲೂರ, ಹಲಕಿ ಕ್ರಾಸ್ ರಸ್ತೆಗಳು ಹದಗೆಟ್ಟು ಅಪಘಾತ ಸಂಭವಿಸುತ್ತಿವೆ. ರಸ್ತೆ ದುರಸ್ತಿ ಮಾಡಿ ಅಪಘಾತ ತಡೆಯಿರಿ ಎಂದು ಬೈಲಹೊಂಗಲ ಲೋಕೋಪಯೋಗಿ ಇಲಾಖೆ ಸಹಾಯಕ ನಿರೀಕ್ಷಕ ಎಂ.ಅನಿಲರಾಜ ಅವರಿಗೆ ವಿವಿಧ ಸಂಘಟನೆ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.
ಮುರಗೋಡ ಸುತ್ತಲಿನ ವಿವಿಧ ಗ್ರಾಮಗಳಿಗೆ ತೆರಳಲು ಮುಖ್ಯ ರಸ್ತೆಗಳು ಸುಮಾರು ವರ್ಷದಿಂದ ರಸ್ತೆ ದುರಸ್ತಿ ಕಾಣದೆ ಅಪಘಾತ ಸಂಭವಿಸುತ್ತಿವೆ. ಪ್ರತಿ ದಿನ ನೂರಾರು ವಾಹನಗಳು ಸೊಗಲ, ತಲ್ಲೂರ, ಹಲಕಿ ಕ್ರಾಸ್ ಮುಖಾಂತರ ಬೆಳಗಾವಿ,ಯರಗಟ್ಟಿ, ಬೈಲಹೊಂಗಲಕ್ಕೆ ಪ್ರಯಾಣಿಸುತ್ತವೆ. ಆದರೆ, ಸುರಕ್ಷತೆ ಇಲ್ಲದೆ ಹದಗೆಟ್ಟ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದು ಸಾಹಸವಾಗಿದೆ.
ತಕ್ಷಣ ಉತ್ತಮ ರಸ್ತೆ ನಿರ್ಮಿಸಿ ಅನುಕೂಲ ಮಾಡಬೇಕು. ಇಲ್ಲವಾದಲ್ಲಿ ರಸ್ತೆ ತಡೆ ನಡೆಸಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಕಾರ್ಮಿಕ ಸಂಘಟನೆ ಅಧ್ಯಕ್ಷ ಮಹಾಂತೇಶ ಬಡಿಗೇರ, ವಿನಾಯಕ ಪಾಸಲಕರ, ಮಹಾಂತೇಶ ಗುಗಂಜಿ, ಶಿವಾನಂದ ದಳವಾಯಿ, ಕಿರಣಕುಮಾರ ಬಡಿಗೇರ, ಚಂದ್ರು ಖಿಲಾರಿ, ಪ್ರವೀಣ ಸನ್ನನಿಂಪನ್ನವರ, ಈರಣ್ಣ ಬಸಿಡೋಣಿ, ಕಾರ್ತಿಕ ಪಾಟೀಲ ಇತರರು ಇದ್ದರು.