ಹದಗೆಟ್ಟ ರಸ್ತೆ, ಕುಸಿದ ತಡೆಗೊಡೆ

9ankola2b
Published on

ಅಂಕೋಲಾ: ತಾಲೂಕಿನ ಮಂಜಗುಣಿಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಲ್ಲಲ್ಲಿ ಈಜುಕೊಳದಂತೆ ನಿರ್ವಣವಾಗಿರುವ ಗುಂಡಿಗಳು ವಾಹನ ಸವಾರರಿಗೆ ಅಡ್ಡಿ ಉಂಟು ಮಾಡುತ್ತಿವೆ.

ಇನ್ನು ಕೇವಲ ರಸ್ತೆಯಷ್ಟೇ ಅಲ್ಲ, ತಡೆಗೋಡೆ ಕೂಡ ಸಂಪೂರ್ಣ ಕುಸಿದಿದ್ದು, 2017ರಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ಮಾಡಲಾಗಿತ್ತು. ಆದರೆ, ಕೆಲವೇ ತಿಂಗಳುಗಳಲ್ಲಿ ತಡೆಗೋಡೆ ಕುಸಿದು ಬೀಳುವುದರೊಂದಿಗೆ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಂತಾಗಿತ್ತು. ನಂತರ ಮಳೆಗಾಲದಲ್ಲಿ ಇನ್ನಷ್ಟು ಕುಸಿದಿದೆ. ಪ್ರಸಕ್ತ ಮಳೆಗಾಲದಲ್ಲಿ ಕಡಲ ಅಲೆಗೆ ರಸ್ತೆಯೇ ಸಂಪೂರ್ಣ ಕೊಚ್ಚಿ ಹೋಗಿ ಮುಳುಗಡೆಯಾಗುವ ಸಂಭವವಿರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.

ಸ್ಥಳೀಯ ಕೆಲವು ಪ್ರಮುಖರು ತಾವೇ ಸ್ವಂತ ಹಣ ಖರ್ಚು ಮಾಡಿ ಹಿಟಾಚಿ ತಂದು ಕಲ್ಲುಗಳನ್ನು ರಸ್ತೆಯ ಕಡೆಗೆ ಹಾಕಿ ಮಳೆಗಾಲದಲ್ಲಿ ಉಂಟಾಗಬಹುದಾದ ಅನಾಹುತ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಹಾಗೂ ಇತರ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಈ ಮಳೆಗಾಲದಲ್ಲಿ ಕಡಲಬ್ಬರ ಹೆಚ್ಚಾದರೆ ರಸ್ತೆ ಅಕ್ಕಪಕ್ಕದ ಮನೆಗಳು ಸೇರಿ ನೂರಾರು ಮನೆಗಳಿಗೆ ಹಾನಿ ಉಂಟಾಗಲಿದೆ. ಈ ಕಾರಣಕ್ಕಾಗಿ ಗ್ರಾಮದ ಕೆಲ ಪ್ರಮುಖರು ಸೇರಿ ಹಣವನ್ನು ಸಂಗ್ರಹಿಸಿ ತಡೆಗೋಡೆಯನ್ನು ತಾತ್ಕಾಲಿಕವಾಗಿ ಸರಿಪಡಿಸುತ್ತಿದ್ದೇವೆ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು.| ಕೆ.ಡಿ. ನಾಯ್ಕ, ಮಂಜಗುಣಿ ನಿವಾಸಿ ಅಂಕೋಲಾ ಮಂಜಗುಣಿ ಮೀನುಗಾರಿಕೆ ಕೊಂಡಿ ರಸ್ತೆ ಕಾಂಕ್ರೀಟ್ ಮಾಡುವುದು ಹಾಗೂ ತಡೆಗೋಡೆ ರಿಪೇರಿ ಕಾಮಗಾರಿಗೆ 6 ಕೋಟಿ ರೂ. ಅಂದಾಜು ಪಟ್ಟಿ ಸಿದ್ಧಮಾಡಿ ಸರ್ಕಾರಕ್ಕೆ ಕಳಿಸಿದ್ದೇವೆ. ಸರ್ಕಾರದಿಂದ ಅದು ಅನುಮೋದನೆಯಾಗಬೇಕಿದೆ. ಇನ್ನು ರಸ್ತೆಗಳ ನಿರ್ವಣದ ನಂತರ ಅದರ ನಿರ್ವಹಣೆ ಜವಾಬ್ದಾರಿ ಸ್ಥಳೀಯ ಗ್ರಾಪಂಗೆ ಸೇರಿದೆ. ಪಿ.ನಾಗರಾಜ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net