

ಹೊಳೆಹೊನ್ನೂರು: ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಿಂದುಪರ ಸಂಘಟನೆಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಗೀರಥ ವೃತ್ತದಲ್ಲಿ ಶುಕ್ರವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲಜ್ಜನಾಳ್ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿಂದು ಪರ ಸಂಘಟನೆಗಳ ಮುಖಂಡರನ್ನೇ ಗುರಿಯಾಗಿಟ್ಟುಕೊಂಡು ಹತ್ಯೆ ಮಾಡಲಾಗುತ್ತಿದೆ. ಇದರಿಂದ ಸಂಘಟನೆ ಹತ್ತಿಕ್ಕಲು ಸಾಧ್ಯವಿಲ್ಲ. ಆದರೆ ಹಿಂದುಗಳು ಪಕ್ಷಾತೀತವಾಗಿ ಮತ್ತಷ್ಟು ಸಂಘಟಿತರಾಗಿ ಗಟ್ಟಿಗೊಳ್ಳುತ್ತಾರೆ. ಯಾವುದೇ ಧರ್ಮ ಹಾಗೂ ಜಾತಿಯ ವ್ಯಕ್ತಿ ಹತ್ಯೆ ಮಾಡುವ ಕಠೋರ ಮನಸ್ಥಿತಿಗೆ ಹೋಗಬಾರದು. ಇಂತಹ ದುಷ್ಕೃತ್ಯ ಮಾಡಿದವರಿಗೆ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು ಎಂದರು.
ಆರ್‌ಎಸ್‌ಎಸ್ ಮುಖಂಡ ಆನವೇರಿಯ ಮಂಜಪ್ಪ ಮಾತನಾಡಿ, ಹಿಂದುಗಳು ಶಾಂತ ಸ್ವಭಾವದವರಾಗಿದ್ದಾರೆ. ಅದನ್ನೇ ದುರುಪಯೋಗ ಮಾಡಿಕೊಂಡು ಹಿಂದುಪರ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡಲಾಗುತ್ತಿದೆ. ಇಂತಹ ಕೃತ್ಯಗಳು ನಡೆದಾಗಲೂ ಎಚ್ಚೆತ್ತುಕೊಳ್ಳದೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಹಿಂದುಗಳೆಲ್ಲರೂ ಒಟ್ಟಾಗಿ ಸೇರಿ ಬೀದಿಗಿಳಿಯುತ್ತಾರೆ. ಎಂತಹ ಪರಿಸ್ಥಿತಿಯನ್ನೂ ಎದುರಿಸುವ ಶಕ್ತಿ ಇದೆ ಎಂದರು.
ಮಂಡಲ ಉಪಾಧ್ಯಕ್ಷ ವೀರೇಶಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಮಲ್ಲೇಶಪ್ಪ, ಉಜ್ಜನಪ್ಪ, ಎಪಿಎಂಸಿ ನಿರ್ದೇಶಕ ಎಸ್.ಶ್ರೀನಿವಾಸ್, ಕುಬೆಂದ್ರಪ್ಪ, ಯು.ಕೆ.ವೆಂಕಟೇಶ್, ಎಸ್.ಬಿ.ಸಿದ್ದಪ್ಪ ಇತರರಿದ್ದರು.