ಹತ್ತು ಸಾವಿರ ಜನರಿಗೆ ಸೌಲಭ್ಯ!

23Jaggu4-Web
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಆರ್‌ಐ ವಿಭಾಗ.
Published on

ಬೆಳಗಾವಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಬೆಳಗಾವಿ ಜಿಲ್ಲಾಸ್ಪತ್ರೆ (ಬಿಮ್ಸ್)ಯಲ್ಲಿ ಬಡವರಿಗಾಗಿ ಆರಂಭಿಸಿರುವ ಸಿಟಿಸ್ಕಾೃನ್, ಎಂಆರ್‌ಐ ಸೌಲಭ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

2021 ಜೂನ್ 4ರಿಂದ ಈ ಸೇವೆ ಆರಂಭಗೊಂಡಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಬಡವರು ಅತ್ಯಂತ ರಿಯಾಯಿತಿ ದರದಲ್ಲಿ ಸಿಟಿ ಸ್ಕಾೃನ್ ಮತ್ತು ಎಂಆರ್‌ಐ ಸ್ಕಾೃನಿಂಗ್ ಸೇವೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಸಿಟಿಸ್ಕಾೃನ್‌ಗೆ 5 ರಿಂದ 6 ಸಾವಿರ ರೂ. ವರೆಗೆ ಖರ್ಚಾಗುತ್ತದೆ. ಎಂಆರ್‌ಐ ಸ್ಕಾೃನ್‌ಗೆ 7,000ಕ್ಕೂ ಅಧಿಕ ಹಣ ವೆಚ್ಚವಾಗುತ್ತದೆ. ಆದರೆ, ಬಿಮ್ಸ್‌ನಲ್ಲಿ ಸಿಟಿಸ್ಕಾೃನ್‌ಗೆ ಕೇವಲ 500 ರಿಂದ 700 ರೂ. ಹಾಗೂ ಎಂಆರ್‌ಐಗೆ 1,000 ರೂ. ಖರ್ಚಾಗುತ್ತಿರುವುದರಿಂದ ಈ ಸೌಲಭ್ಯ ಬಡವರಿಗೆ ವರದಾನವಾದಂತಾಗಿದೆ.

24x7 ಮಾದರಿ ಸೇವೆ: ಬಿಮ್ಸ್‌ನಲ್ಲಿ ಆರಂಭಿಸಿರುವ ಸಿಟಿಸ್ಕಾೃನ್, ಎಂಆರ್‌ಐ ಸೌಲಭ್ಯವು ಬಡವರಿಗೆ ದಿನದ 24 ಗಂಟೆಯೂ ತೆರೆದಿರುತ್ತದೆ. ಯಾವ ಸರ್ಕಾರಿ ರಜೆಯೂ ಅನ್ವಯಿಸುವುದಿಲ್ಲ. ಶನಿವಾರ, ಭಾನುವಾರವೂ ಈ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೇ ಸರ್ಕಾರಿ ರಜೆಗಳಾದ ಆ.15, ಜ.26, ಅ.2, ನ.1, ಯುಗಾದಿ, ಮಹಾನವಮಿ, ಗಣೇಶ ಚತುರ್ಥಿ ಹೀಗೆ ಎಲ್ಲ ಸರ್ಕಾರಿ ರಜೆಗಳು ಸಂದರ್ಭದಲ್ಲೂ ಸೇವೆ ಲಭ್ಯವಿರುತ್ತದೆ ಎಂದು ಬಿಮ್ಸ್ ವೈದ್ಯರು ಹೇಳುತ್ತಾರೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಬಿಮ್ಸ್ ಆಡಳಿತ ಮೇಲುಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಂದಿನಿಂದ ಈ ನಿಯಮ ಪಾಲನೆಯಾಗುತ್ತಿದೆ.

ರೋಗಿಗಳಿಗೆ ಉಚಿತ: ಆಸ್ಪತ್ರೆಗೆ ದಾಖಲಾದ ರೋಗಿ ಗಳಿಗೆ ಸಿಟಿಸ್ಕಾೃನ್, ಎಂಆರ್‌ಐ ಸ್ಕಾೃನ್ ಸೇವೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ, ರೋಗ ಪತ್ತೆಗೆ ಸ್ಕಾೃನ್‌ಗೆ ಬರುವವರಿಗೆ ಮಾತ್ರ ರಿಯಾಯಿತಿ ದರ ಪಡೆಯಾಗುತ್ತಿದೆ. 2021ರ ಜೂನ್ 4ರಿಂದ ಇಲ್ಲಿಯವರೆಗೆ ಸುಮಾರು 10 ಸಾವಿರ ಬಡವರು ಈ ಸೇವೆ ಪಡೆದಿದ್ದಾರೆ. ಬೆನ್ನು ನೋವು, ನರರೋಗ, ಹೊಟ್ಟೆ ನೋವು, ಮಿದುಳು ಸಮಸ್ಯೆ ಸೇರಿ ಹಲವಾರು ಕಾಯಿಲೆಗಳ ರೋಗಿಗಳುಪರಿಶೀಲಿಸಿಕೊಳ್ಳುವುದಕ್ಕೆ ಬರುತ್ತಿದ್ದಾರೆ. ಹಗಲು-ರಾತ್ರಿ ಡಯಾಲಿಸೀಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಸಿಬ್ಬಂದಿ ನಿಯೋಜನೆಗೆ ನಿರ್ಧಾರ

ಸಿಟಿಸ್ಕಾೃನ್ ಹಾಗೂ ಎಂಆರ್‌ಐ ವಿಭಾಗದಲ್ಲಿ 13 ತಾಂತ್ರಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೊಂದಿಗೆ 5 ತಜ್ಞ ವೈದ್ಯರು ರೋಗಿಗಳ ತಪಾಸಣೆ ಕಾರ್ಯ ಮಾಡುತ್ತಿದ್ದಾರೆ. ನಿತ್ಯ 25-30 ಜನರ ಸಿಟಿಸ್ಕಾೃನ್ ಆಗುತ್ತಿದೆ. 10ರಿಂದ 15 ಜನರ ಎಂಆರ್‌ಐ ಸ್ಕಾೃನ್ ಮಾಡಲಾಗುತ್ತಿದೆ. ಇನ್ನೂ ಇಬ್ಬರು ಸಿಬ್ಬಂದಿ ಸದ್ಯದಲ್ಲೇ ನೇಮಕ ಆಗಲಿದ್ದಾರೆ.

ಬಿಮ್ಸ್‌ನಲ್ಲಿ ರಿಯಾಯಿತಿ ದರದಲ್ಲಿ ಸಿಟಿ ಸ್ಕಾೃನ್ ಹಾಗೂ ಎಂಐಆರ್ ಸೌಲಭ್ಯ ಕಲ್ಪಿಸಲಾಗಿದೆ. ಬಡರೋಗಿಗಳು ಇದರ ಪ್ರಯೋಜನ ಪಡೆಯಬಹುದು. ಸರ್ಕಾರಿ ರಜೆ ದಿನಗಳಲ್ಲೂ ಈ ಘಟಕ ತೆರೆದಿರುತ್ತದೆ.| ಡಾ. ಆರ್.ಜಿ. ವಿವೇಕಿ, ಬಿಮ್ಸ್ ನಿರ್ದೇಶಕ

|ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net