

ಗದಗ: ನರಗುಂದ, ರೋಣ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳ ಜನರು ನೆರೆ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ನೆರೆಯಿಂದ ಪರದಾಡಿದ ಜನರ ಬದುಕು ತುಸು ಸುಧಾರಿಸಿಕೊಳ್ಳುವ ಮುನ್ನವೇ ಮತ್ತೊಮ್ಮೆ ನೆರೆ ಒಕ್ಕರಿಸಿದ್ದು ಆಘಾತ ಮೂಡಿಸಿದೆ.
ಈಗಾಗಲೇ ನರಗುಂದ ತಾಲೂಕಿನ ಲಖಮಾಪುರ, ಬೂದಿಹಾಳ ಮತ್ತು ಭಾಗಶಃ ಕೊಣ್ಣೂರು ಗ್ರಾಮದಲ್ಲಿ ನೀರು ನುಗ್ಗಿದ್ದು, ಜನರ ಸ್ಥಿತಿ ಅಯೋಮಯವಾಗಿದೆ. ನೀರಿನ ಹರಿವು ಹೆಚ್ಚುತ್ತಿರುವುದರಿಂದ ಮಲಪ್ರಭೆ ಇನ್ನೂ ಏನೆಲ್ಲ ಆವಾಂತರ ಸೃಷ್ಟಿಸಲಿದೆ ಎಂಬ ಭಯ ಶುರುವಾಗಿದೆ.
ವರ್ಷಗಟ್ಟಲೇ ಜತನದಿಂದ ಕಟ್ಟಿಕೊಂಡಿದ್ದ ಬದುಕು ಕಣ್ಣೆದುರೇ ಸರ್ವನಾಶ ಆಗುತ್ತಿರುವುದನ್ನು ಕಂಡ ಸಂತ್ರಸ್ತರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿದೆ. ಶಾಶ್ವತ ಪರಿಹಾರ ಮಾಡಿಕೊಡಿ ಎಂದು ಸರ್ಕಾರಕ್ಕೆ ಅಂಗಲಾಚಿದರೂ ಪರಿಹಾರ ಸಿಗುತ್ತಿಲ್ಲ. ಪದೇ ಪದೆ ನೆರೆಗೆ ತುತ್ತಾಗಿ ಎಲ್ಲವನ್ನೂ ಕಳೆದುಕೊಂಡ ಮೇಲೆ ಬದುಕುವುದು ಹೇಗೆ ಎಂದು ಸಂತ್ರಸ್ತರು ಪ್ರಶ್ನಿಸುತ್ತಿದ್ದಾರೆ. ಹಲವರು ಆಘಾತಕ್ಕೆ ಒಳಗಾಗಿದ್ದಾರೆ. ಸರ್ಕಾರದ ಕಾಳಜಿ ಕೇಂದ್ರದಲ್ಲಿ ವಾಸವಿರುವ ಸಂತ್ರಸ್ತರಿಗೆ ಭವಿಷ್ಯ ಸವಾಲಾಗಿ ಪರಿಣಮಿಸಿದೆ.
ಬೆಳೆಗಳು ಜಲಾವೃತಗೊಂಡಿವೆ. ನೀರಿನ ಆರ್ಭಟಕ್ಕೆ ರಸ್ತೆಗಳು, ಸೇತುವೆಗಳು ಕಿತ್ತುಹೋಗಿವೆ. ಮನೆ ಮತ್ತು ಜಮೀನುಗಳ ಸ್ಥಿತಿ ಕಂಡು ಕಣ್ಣೀರು ಹರಿಸುವುದೊಂದೇ ಅವರಿಗೆ ಉಳಿದಿರುವ ಮಾರ್ಗ. ಕುರಿ, ಆಡು, ಜಾನುವಾರುಗಳು ನೀರಲ್ಲಿ ತೇಲಿ ಹೋಗಿವೆ ಎಂದು ಅಳಲು ತೋಡಿಕೊಳ್ಳುವ ಸಂತ್ರಸ್ತರು ಕಣ್ಣೀರಿಡುತ್ತಿದ್ದಾರೆ.
ಸಂಚಾರ ಬಂದ್: ಉಕ್ಕಿ ಹರಿಯುತ್ತಿರುವ ಮಲಪ್ರಭೆಯ ಕೋಪಕ್ಕೆ ಸಾವಿರಾರು ಜನರ ಬದುಕು ಮತ್ತೊಮ್ಮೆ ಮೂರಾಬಟ್ಟೆಯಾಗಿದೆ. ಕೊಣ್ಣೂರ ಬಳಿ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ನೀರು ರಭಸದಿಂದ ಹರಿಯುತ್ತಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.
ಮಲಪ್ರಭಾ ನದಿ ದಂಡೆ ಮೇಲಿರುವ ನರಗುಂದ ತಾಲೂಕಿನ ಕಟ್ಟಕಡೆಯ ಗ್ರಾಮ ಲಖಮಾಪುರ ಈಗ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಬಹುಶಃ ಇಡೀ ಪ್ರವಾಹದಲ್ಲಿ ಅತ್ಯಂತ ಹೊಡೆತ ತಿಂದಿರುವ ಗ್ರಾಮ ಇದಾಗಿದೆ. ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಖಮಾಪುರದಲ್ಲಿ 150 ಮನೆಗಳಿದ್ದು, 2000 ಜನರು ಇಲ್ಲಿ ವಾಸಿಸುತ್ತಾರೆ. ನೆರೆಯಿಂದ ಅವರ ಬದುಕು ಕೊಚ್ಚಿಹೋದಂತಾಗಿದೆ.
ನವಿಲುತೀರ್ಥ ಡ್ಯಾಂನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿಬಿಡಲಾಗುತ್ತಿದೆ ಎಂಬ ಮುನ್ಸೂಚನೆಯಿಂದ ಗ್ರಾಮಸ್ಥರನ್ನು ಮುಂಚಿತವಾಗಿ ಸ್ಥಳಾಂತರ ಮಾಡಲಾಯಿತು. ಬೆಳ್ಳೇರಿಯಲ್ಲಿ ಸರ್ಕಾರ ಆರಂಭಿಸಿದ ಕಾಳಜಿ ಕೇಂದ್ರದಲ್ಲಿ ಲಖಮಾಪೂರ ಮತ್ತು ಬೂದಿಹಾಳ ಗ್ರಾಮದ ಜನರು ಉಳಿದುಕೊಂಡಿದ್ದಾರೆ.
ಕಾಲಿಗೆ ಬೀಳ್ತಿವಿ ಸೂರು ಕಲ್ಪಿಸಿ: ಸರ್ಕಾರಕ್ಕೆ ನಾವು ಸಾವಿರ ಸಲ ಕೈ ಮುಗಿತೀವಿ, ಕಾಲು ಬೀಳ್ತೀವಿ, ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ನಮ್ಮನ್ನು ಕೈಬಿಡಬೇಡಿ. ಮನೆ, ಹೊಲ, ಬೆಳೆಗಳು ಎಲ್ಲವೂ ಕೊಚ್ಚಿ ಹೋಗಿವೆ. ನೀವು ಕೈಹಿಡಿಯದಿದ್ದರೆ ಜೀವನ ಮಾಡಲಾಗದೆ ನಾವು ಕೊಚ್ಚಿಕೊಂಡು ಹೋಗಬೇಕಾಗುತ್ತದೆ. ದಯಮಾಡಿ ನಮಗೆ ಕೂಡಲೆ ಶಾಶ್ವತ ಸೂರು ಕಲ್ಪಿಸಿಕೊಡಬೇಕು. ಗ್ರಾಮವನ್ನು ಸ್ಥಳಾಂತರ ಮಾಡಿದರೆ ಎಲ್ಲರಿಗೂ ಪುಣ್ಯ ಬರಲಿದೆ ಎಂದು ಲಖಮಾಪೂರ ಮತ್ತು ಬೂದಿಹಾಳ ಗಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.