ಹತ್ತಿಗೆ ಗುಲಾಬಿ ಕಾಯಿಕೊರಕದ ಕಾಟ

KLB3
ನಾಲವಾರದ ಹತ್ತಿ ಹೊಲಗಳಿಗೆ ನಾಲವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಉಮೇಶ ಭರಿಕರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ರೈತ ಮಲ್ಲಪ್ಪ ಇದ್ದರು.
Published on

ಚಿತ್ತಾಪುರ: ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಹತ್ತಿ ಬೆಳೆ ಹೂವಾಡುವ ಹಂತದಲ್ಲಿದ್ದು, ಈ ವೇಳೆ ಗುಲಾಬಿ ಕಾಯಿಕೊರಕದ ಬಾಧೆ ಪ್ರಾರಂಭವಾಗುತ್ತಿದೆ. ರೈತರು ಕೀಟಬಾಧೆಗೆ ಸೂಕ್ತ ನಿರ್ವಹಣೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ ಎಂದು ನಾಲವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ಉಮೇಶ ಭರಿಕರ ಹೇಳಿದರು.

ನಾಲವಾರ ವಲಯದ ಹತ್ತಿ ಹೊಲಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ತಾಲೂಕಿನಲ್ಲಿ 11 ಸಾವಿರ ಹೆಕ್ಟೇರ್ ಹತ್ತಿ ಬಿತ್ತನೆ ಗುರಿ ಹೊಂದಿದ್ದು, ಈ ಪೈಕಿ 9,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಸಾಮಾನ್ಯವಾಗಿ ಕಳೆದ ವರ್ಷದ ಬೆಳೆಯ ಅವಶೇಷಗಳಿಂದಲೇ ಹತ್ತಿಗೆ ಗುಲಾಬಿ ಕಾಯಿಕೊರಕ ಕಾಡುತ್ತಿದೆ. ಚಿಟ್ಟೆಗಳು ಬೆಳೆಗಳಲ್ಲಿ ಮೊಟ್ಟೆಗಳನ್ನಿಟ್ಟು, ಮೊಟ್ಟೆಯಿಂದ ಹೊರಬಂದ ಕೀಟಗಳು ಬಾಧೆಯನ್ನುಂಟು ಮಾಡುತ್ತವೆ. ರೈತರು ಕೀಟಬಾಧೆ ಅರಿತುಕೊಳ್ಳಲು ಸಮೀಕ್ಷೆ ಮಾಡುವುದು ಒಳ್ಳೆಯದು ಎಂದರು.

ಕೀಟದ ಸಮೀಕ್ಷೆಗಾಗಿ ಪ್ರತಿ ಎಕರೆಗೆ 2ರಂತೆ ಲಿಂಗಾಕರ್ಷಕ ಬಲೆಗಳನ್ನು ಹಾಕಬೇಕು. ಬಲೆಯಲ್ಲಿ ಪ್ರತಿದಿನ ಒಂದು ಎಕರೆಗೆ ಒಂದು ಬಲೆಯಲ್ಲಿ 4 ಕೀಟಗಳು ಕಂಡುಬAದರೆ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು. ಈ ಕೀಟದ ಗಂಡು ಪತಂಗಗಳನ್ನು ಸಾಮೂಹಿಕವಾಗಿ ಆಕರ್ಷಿಸಿ ನಾಶಪಡಿಸಲು ಪ್ರತಿ ಎಕರೆಗೆ 8-10 ರಂತೆ ಮೋಹಕ ಬಲೆಗಳನ್ನು ಸಮಾನಾಂತರವಾಗಿ ಅಳವಡಿಸಿ ಗಂಡು ಕೀಟಗಳ ನಿಯಂತ್ರಣ ಮಾಡುವುದರಿಂದ ಸಂತತಿ ನಾಶವಾಗುತ್ತದೆ, ಜತೆಗೆ ನಿರ್ವಹಣೆ ಸುಲಭವಾಗಲಿದೆ. ಮೋಹಕ ಬಲೆಗಳನ್ನು ಬೆಳೆಯ ಮಟ್ಟಕ್ಕಿಂತ 20 ರಿಂದ 30 ಸೆಮೀ. ಎತ್ತರದಲ್ಲಿರಬೇಕು. 20-30 ದಿನಗಳಿಗೊಮ್ಮೆ ಲೂರ್ಗಗಳನ್ನು ಬದಲಾಯಿಸಬೇಕು ಎಂದು ಸಲಹೆ ನೀಡಿದರು.

ಬೆಳೆಯು 100 ದಿನಗಳಿಗಿಂತ ಕಡಿಮೆ ಅವದಿಯದಾಗಿದ್ದರೆ 2 ಮಿಲೀ. ಪ್ರೊಫೆನೋಫಾಸ್ 50 ಇ.ಸಿ. ಅಥವಾ 1.0 ಗ್ರಾಂ ಥಯೋಡಿಕಾರ್ಬ್ 75 ಡಬ್ಲೂಪಿ ಅಥವಾ 2.0 ಮಿಲೀ. ಕ್ವಿನಾಲ್ ಫಾಸ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 100 ದಿನಗಳ ನಂತರದ ಬೆಳೆಯಾಗಿದ್ದರೆ ಅವಶ್ಯಕತೆಗನುಸಾರವಾಗಿ 0.5 ಮಿಲೀ. ಲ್ಯಾಮ್ಯಾಸ್ಟೆಲೋಡ್ರಿನ್ ಅಥವಾ 0.5 ಮಿಲೀ. ಡೆಕಾಮೈಥಿನ್ 2.8 ಇ.ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ ಎಕರೆಗೆ 200-250 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. ಲಿಂಗಾಕರ್ಷಕಗಳನ್ನು ಬಳಸಿ ಕೀಟದ ನಿರ್ವಹಣೆ ಮಾಡುವುದರಿಂದ ವಾತಾವರಣದಲ್ಲಿ ರಸಾಯನಿಕಗಳಿಂದಾಗುವ ಮಾಲಿನ್ಯ ಮತ್ತು ದುಷ್ಪರಿಣಾಮಗಳನ್ನು ಕಡಿಮೆಗೊಳಿಸಬಹುದು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಮೊ.9948313525 ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು. ರೈತ ಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net