

ಗದಗ: ಗುಣಮಟ್ಟ ಸರಿಯಾಗಿಲ್ಲ ಎಂದು ಹತ್ತಿ ಖರೀದಿಗೆ ಭಾರತೀಯ ಹತ್ತಿ ನಿಗಮದ ಅಧಿಕಾರಿಗಳು ನಿರಾಕರಿಸಿದ್ದರಿಂದ ಜಿಲ್ಲೆಯಲ್ಲಿ ಹತ್ತಿ ಬೆಳೆದ ರೈತರು ಪರದಾಡುವಂತ ಸ್ಥಿತಿ ನಿರ್ವಣವಾಗಿದೆ.
ಮೂರು ದಿನಗಳಿಂದ ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಲ್ಲಿ ರೋಣ, ನರಗುಂದ, ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಹತ್ತಿ ತೆಗೆದುಕೊಂಡು ಬಂದಿದ್ದರು. ನಗರದ ಕಾಟನ್ಸೇಲ್ ಸೊಸೈಟಿಯಲ್ಲಿರುವ ಬೆಂಬಲ ಬೆಲೆಯಡಿ ಹತ್ತಿ ಖರೀದಿ ಕೇಂದ್ರದ ಬಳಿ ಕಾಯುತ್ತಾ ಕುಳಿತಿದ್ದರು. ಆದರೆ, ಹತ್ತಿ ಗುಣಮಟ್ಟ ಪರೀಕ್ಷಿಸಿದ ಅಧಿಕಾರಿಗಳು ಹತ್ತಿಯ ಗುಣಮಟ್ಟ ಕಡಿಮೆ ಇದ್ದು, ಬೆಂಬಲ ಬೆಲೆಯಡಿ ಖರೀದಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಗುಣಮಟ್ಟದ ಹತ್ತಿ ಖರೀದಿಸಿ, 46 ವಾಹನಗಳಲ್ಲಿದ್ದ ಹತ್ತಿ ಖರೀದಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಆಗ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದ್ದರಿಂದ ಎಲ್ಲ 46 ವಾಹನಗಳಲ್ಲಿದ್ದ ಹತ್ತಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ 14 ವಾಹನದಲ್ಲಿದ್ದ ಗುಣಮಟ್ಟದ ಹತ್ತಿಯನ್ನು ಖರೀದಿಸಲಾಯಿತು. ಆದರೆ, ಉಳಿದ 32 ವಾಹನದಲ್ಲಿದ್ದ ಹತ್ತಿ ಖರೀದಿಸಿ ಎಂದು ರೈತರು ಒತ್ತಾಯಿಸಿದರು. ಆದರೆ, ಗುಣಮಟ್ಟ ಇಲ್ಲದ ಹತ್ತಿ ಖರೀದಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ಮತ್ತು ಎರಡನೇ ಬಿಡಿಕೆ ಹತ್ತಿಯಾದರೆ ಸಮಸ್ಯೆ ಇಲ್ಲ. ಆದರೆ, ಇದು ಮೂರನೇ ಬಿಡಿಕೆಯ ಹತ್ತಿ. ಹೀಗಾಗಿ ಖರೀದಿಸಲು ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಖರೀದಿ ಕೇಂದ್ರದಲ್ಲಿ ಹತ್ತಿ ಖರೀದಿಸುತ್ತಿಲ್ಲ. ಹತ್ತಿಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಬರಲು ಸಾಕಷ್ಟು ಹಣ ಖರ್ಚಾಗುತ್ತಿದೆ. ಲಕ್ಷಾಂತರ ರೂ. ಸಾಲವೂ ಇದೆ. ಹೀಗಾದರೆ ಬದುಕುವುದು ಹೇಗೆ ಎಂದು ಅನೇಕ ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಅಲ್ಲದೆ, ಟ್ರ್ಯಾಕ್ಟರ್ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ನಂತರ ಕೆಲ ರೈತರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಭೇಟಿ ಮಾಡಿ ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ಹತ್ತಿ ಗುಣಮಟ್ಟ ಸರಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸುತ್ತೇನೆ ಎಂದು ಭರವಸೆ ನೀಡಿದ ನಂತರ ರೈತರು ಅಲ್ಲಿಂದ ಹೊರಟುಹೋದರು.
EndFragment