ಹತ್ತಾರು ಅಂಗಡಿ ಮೇಲೆ ಆಹಾರ ಸುರಕ್ಷತೆ ಔಷಧಾಡಳಿತ ಇಲಾಖೆ ಅಧಿಕಾರಿಗಳ ದಾಳಿ

21_HSN_01
Published on

ಹಾಸನ: ಆಹಾರ ಸುರಕ್ಷತೆ ಮತ್ತು ಔಷಧಾಡಳಿತ ಇಲಾಖೆ ವತಿಯಿಂದ ಗುರುವಾರ ನಗರದ ಹೃದಯಭಾಗದಲ್ಲಿರುವ ಸಿಟಿ ಬಸ್ ನಿಲ್ದಾಣ ವ್ಯಾಪ್ತಿಯ ಹತ್ತಾರು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಲಾಯಿತು.

ಅಂಕಿತಾಧಿಕಾರಿ ಡಾ.ಅನಿಲ್ ಧವನ್ ಅವರ ಆದೇಶ ಮತ್ತು ಮಾರ್ಗದರ್ಶನದಲ್ಲಿ ದಿಢೀರ್ ದಾಳಿ ನಡೆಸಲಾಯಿತು. ಬೇಕರಿ, ವಿವಿಧ ಹಣ್ಣು ಮಾರಾಟ ಅಂಗಡಿ, ಪಾನಿಪುರಿ ಮಾರಾಟ ಸ್ಟಾಲ್, ಕಾಂಡಿಮೆಂಟ್ಸ್ ಆಂಡ್ ಚಾಟ್ಸ್, ಜ್ಯೂಸ್, ಟೀ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿದ್ದ ತಿನಿಸು, ಸ್ವಚ್ಛತೆ ಕುರಿತು ಪರಿಶೀಲಿಸಿದರು.

ಈ ಹಿಂದೆಯೇ ಉದ್ದಿಮೆ ಪರವಾನಗಿ ಪತ್ರ ಹಾಗೂ ಆಹಾರ ಗುಣಮಟ್ಟದ ಲೈಸೆನ್ಸ್ ಪಡೆಯಲು ತಿಳಿಸಲಾಗಿತ್ತು. ಆದರೂ ಬಹುತೇಕರು ಯಾವುದೇ ಪರವಾನಗಿ ಪಡೆಯದೇ ಇರುವುದು ತಪಾಸಣೆ ವೇಳೆ ಕಂಡು ಬಂತು. ಪರವಾನಗಿ ಸೂಚನೆ ಪಾಲನೆ ಮಾಡದೆ ಅಂಗಡಿಗಳ ಮಾಲೀಕರಿಗೆ ಸ್ಥಳದಲ್ಲೇ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದರು.

ಕೂಡಲೇ ಲೈಸೆನ್ಸ್ ಪಡೆಯಬೇಕು. ಮುಂದೆಯೂ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿದರೆ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಬೇಸಿಗೆ ಸಮಯ ಆಗಿರುವುದರಿಂದ ಸ್ವಚ್ಛತೆಗೆ ಒತ್ತು ನೀಡಬೇಕು. ಗುಣಮಟ್ಟದ ಹಣ್ಣು, ಆಹಾರ ಪದಾರ್ಥಗಳನ್ನು ಮಾರಾಟ ಮಾಡಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಇದೇ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಯಿತು ಹಾಗೂ ಅನುಮಾನಾಸ್ಪದವಾಗಿ ಕಂಡು ಬಂದ ಆಹಾರ ಪದಾರ್ಥಗಳನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳಿಸಲಾಯಿತು.

ಈ ಸಂದರ್ಭದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಾದ ಎಚ್.ಎಂ.ಬಸವೇಗೌಡ, ಕೆ. ವಿನಯ್, ಎಂ.ಎನ್. ಶಿವರಾಮು, ಸಿಬ್ಬಂದಿ ನಿತ್ಯಾನಂದ, ಪ್ರಜ್ವಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net