

ಚನ್ನಪಟ್ಟಣ: ತಮ್ಮ ಪಕ್ಷದಲ್ಲಿಯೇ ಸಿ.ಪಿ.ಯೋಗೇಶ್ವರ್‌ಗೆ ಗೌರವ ಸಿಗುತ್ತಿಲ್ಲ. ಈ ಕಾರಣದಿಂದ ಹತಾಶರಾಗಿರುವ ಅವರಿಗೆ ಬುದ್ಧಿಭ್ರಮಣೆಯಾಗಿದೆ. ಹಾಗಾಗಿ ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಮಾಜಿ ಸಚಿವ ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ತಿಟ್ಟವಾರನಹಳ್ಳಿ ರಸ್ತೆಯಲ್ಲಿರುವ ಕಲ್ಯಾಣಮಂಟಪದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಅವರು ಮುಂದಿನ ಚುನಾವಣೆಯ ದೃಷ್ಟಿಯಿಂದ ಇತ್ತೀಚೆಗೆ ತಾಲೂಕಿನಲ್ಲಿ ಸಕ್ರಿಯರಾಗಿದ್ದಾರೆ. ಕ್ಷೇತ್ರದ ರಾಜಕೀಯದಲ್ಲಿ ಸುಂಟರಗಾಳಿ ಹಾಗೂ ಸುನಾಮಿ ಎಬ್ಬಿಸುತ್ತೇನೆ ಎಂದವರಿಗೆ ಸಣ್ಣ ಗಾಳಿಯೂ ಬೀಸುತ್ತಿಲ್ಲ. ಜೆಡಿಎಸ್ ಟಾಂಗ್ ಕೊಡಬೇಕೆನ್ನುವ ಯತ್ನ ವಿಲವಾಗಿದೆ ಎಂದು ಕುಟುಕಿದರು.
ಕಳೆದ ಮೂರೂವರೆ ವರ್ಷದಿಂದ ಮರೆಯಾಗಿದ್ದ ತಾವು, ಮುಂದಿನ ಚುನಾವಣೆ ನೆಪದಲ್ಲಿ ರಾಜಕೀಯ ಗಿಮಿಕ್ ಆರಂಭಿಸಿದ್ದೀರಿ. ಈ ನಡುವೆ ನಮ್ಮ ನಾಯಕರಾದ ಕುಮಾರಸ್ವಾಮಿ ಅವರಿಗೆ ಪಕ್ಷಾತೀತವಾಗಿ ಎಲ್ಲೆಡೆ ಸಿಗುತ್ತಿರುವ ಪ್ರೀತಿ ಕಂಡು ಹತಾಶವಾಗಿದ್ದೀರಿ. ಬಿಜೆಪಿಯಲ್ಲೇ ಉಳಿಯಬೇಕಾ ಅಥವಾ ಪಕ್ಷವನ್ನು ಬಿಡಬೇಕಾ ಎಂಬ ಗೊಂದಲಕ್ಕೆ ಸಿಲುಕಿರುವ ನೀವು ಎಚ್‌ಡಿಕೆ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದೀರಿ ಎಂದು ಸಿಪಿವೈಗೆ ಜಯಮುತ್ತು ಟಾಂಗ್ ನೀಡಿದರು.
ಜೆಡಿಎಸ್ ಹಿರಿಯ ಮುಖಂಡ ಸಿ.ಲಿಂ.ನಾಗರಾಜು ಮಾತನಾಡಿ, ಕುಮಾರಸ್ವಾಮಿ ಅವರನ್ನು ಬೈಯ್ದರೆ ಬಿಜೆಪಿಯವರು ಕರೆದು ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಭ್ರಮೆಯಲ್ಲಿ ಸಿಪಿವೈ ಇದ್ದಾರೆ. ಅವರದೇ ಪಕ್ಷದ ಶಾಸಕ ರೇಣುಕಾಚಾರ್ಯ ನಿಮ್ಮನ್ನು ಸುಳ್ಳುಗಾರ ಎಂದು ಕರೆಯುತ್ತಾರೆ. ರುದ್ರೇಶ್ ನಿಮ್ಮನ್ನು ವಿರೋಧಿಸುತ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಮಗ ವಿಜೇಯೇಂದ್ರ ನಿಮ್ಮನ್ನು ದೂರವಿಟ್ಟಿದ್ದಾರೆ. ಅವರ ಮನೆ ಹತ್ತಿರ ಸಹ ಸೇರಿಸುವುದಿಲ್ಲ. ನಿಮ್ಮ ಯೋಗ್ಯತೆ ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು.
ನೀವು ರಾಸಲೀಲೆ ಆಡುತ್ತಿದೀರಾ?: ಕುಮಾರಸ್ವಾಮಿ ವಿರುದ್ಧ ರಾಸಲೀಲೆ ಆರೋಪ ಮಾಡುವ ಯೋಗೇಶ್ವರ್ ಮೂರೂವರೆ ವರ್ಷದಿಂದ ರಾಸಲೀಲೆ ಆಡುತ್ತಿದ್ದರಾ..? ನಿಮ್ಮ ರಾಜಕೀಯ ಆರಂಭದ ದಿನದಿಂದಲೂ ನಿಮ್ಮ ರಾಜಕೀಯ ಆಟಗಳನ್ನು ತಾಲೂಕಿನ ಜನತೆ ಚೆನ್ನಾಗಿ ಅರಿತಿದ್ದಾರೆ. ಮೆಗಾಸಿಟಿ ಹಗರಣದ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಒಂದು ಕಡೆ ಅದು ಖುಲಾಸೆಯಾದರೆ ಇನ್ನೊಂದು ಕಡೆ ತನಿಖೆಗೆ ಆದೇಶವಾಗಿದೆ. ಈ ಹಿಂದೆ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿ ಬೆಲೆ ತೆತ್ತಿದ್ದೀರಿ, ಇನ್ನಾದರೂ ಎಚ್ಚೆತ್ತುಕೊಳ್ಳಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಜಯಮುತ್ತು ಎಚ್ಚರಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಬೋರ್‌ವೆಲ್ ರಾಮಚಂದ್ರು, ನಾಗವಾರ ರಂಗಸ್ವಾಮಿ, ವಡ್ಡರಹಳ್ಳಿ ರಾಜಣ್ಣ, ಭಾನುಪ್ರಸಾದ್, ಬೈರಾಪಟ್ಟಣ ರವಿಕುವಾರ್, ಮೋಳೆದೊಡ್ಡಿ ಬಿಳಿಯಪ್ಪ, ದ್ಯಾವಪಟ್ಟಣ ಮಲ್ಲೇಶ್, ಎಂಸಿಎಚ್ ಮೆಹೇಶ್, ಅರಳಾಳುಸಂದ್ರ ಜಗದೀಶ್, ಮಳೂರುಪಟ್ಟಣ ರವಿ, ಮುರಳೀಧರ್, ಜೆಡಿಎಸ್ ಮಹಿಳಾ ಟಕದ ಜಿಲ್ಲಾಧ್ಯಕ್ಷೆ ರೇಖಾ ಉವಾಶಂಕರ್, ನಗರಸಭಾ ಸದಸ್ಯರಾದ ಸತೀಶ್‌ಬಾಬು, ರಫೀಕ್, ಗ್ರಾಪಂ ಅಧ್ಯಕ್ಷರುಗಳಾದ ಕೂಡ್ಲೂರು ಗೋವಿಂದೇಗೌಡ, ಮುದಗೆರೆ ಬಿಂದು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಲಿತರ ಜಮೀನು: ರಾಜ್ಯ ಒಕ್ಕಲಿಗರ ಸಂದ ಕಾರ್ಯಾಧ್ಯಕ್ಷ ಹಾಪ್‌ಕಾಮ್ಸ್ ದೇವರಾಜು ವಾತನಾಡಿ, ಕುವಾರಸ್ವಾಮಿ ಬಿಡದಿಯಲ್ಲಿ ಯಾವ ದಲಿತರ ಜಮೀನು ಕಸಿದುಕೊಂಡಿಲ್ಲ. ಆ ಜಮೀನನ್ನು ಅವರಿಗಾಗಿ ನಾನೇ ಖರೀದಿಸಿದ್ದೆ. ಅದು ಪಿತ್ರಾರ್ಜಿತ ಆಸ್ತಿಯಾಗಿದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸರಿಯಾದ ರೀತಿಯಲ್ಲೇ ಖರೀದಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.