ಹಣ್ಣು-ತರಕಾರಿಗೆ ತಟ್ಟಿದ ತೈಲ ಬೆಲೆ ಏರಿಕೆ

Tarakari
Published on

ಚಿತ್ರದುರ್ಗ: ಬರದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಏರಿಕೆಯಾಗಿದ್ದ ತರಕಾರಿಗೆ ಇದೀಗ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, 2-3 ವಾರಗಳ ಹಿಂದಷ್ಟೇ ತಗ್ಗಿದ್ದ ತರಕಾರಿ ಬೆಲೆ ಮತ್ತೆ ಏರಿಕೆ ಕಂಡಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿ ಕಂಗಾಲಾಗಿದ್ದಾರೆ.

ಬೇಸಿಗೆ, ಮಳೆ, ಚಳಿಗಾಲ ಇರಲಿ, ಏನೂ ಇಲ್ಲದಿದ್ದರೂ ವಿವಿಧ ಕಾರಣಗಳಿಂದಾಗಿ ವರ್ಷಪೂರ್ತಿ ಹಣ್ಣು-ತರಕಾರಿ ಬೆಲೆ ಹೆಚ್ಚುತ್ತಲೇ ಇದೆ. ಹೀಗೆ ನಿತ್ಯದ ಬಳಕೆಗೆ ಅಗತ್ಯವಾದ ಆಹಾರ ಪದಾರ್ಥಗಳು ಕೈಗೆಟುಕದಂತಾಗಿದ್ದು, ಬಡ ಹಾಗೂ ಮಧ್ಯಮ ವರ್ಗದವರು ಬುದಕುವುದಾದರೂ ಹೇಗೆ ಎಂಬ ಪ್ರಶ್ನೇ ಎದುರಾಗಿದೆ.

ಮೂರು ತಿಂಗಳಿನಿಂದಲೂ ಬೀನ್ಸ್ ದರ ಕೆ.ಜಿ.ಗೆ 120ರಿಂದ 200ರ ಅಸುಪಾಸಿನಲ್ಲಿದ್ದರೆ, ಬಟಾಣಿ ದರ 240 ರೂ.. ಕ್ಯಾಪ್ಸಿಕಂ, ಸೀಮೆ ಬದನೆ ತಲಾ 80 ರೂ., ಹಸಿ ಮೆಣಸಿನಕಾಯಿ 80-100 ರೂ., ಬದನೆಕಾಯಿ 40 ರೂ., ಮೂಲಂಗಿ, ಬೆಂಡೆಕಾಯಿ ತಲಾ 60 ರೂ. ಇದೆ. ಅಲ್ಲದೆ, ಪ್ರತಿ ದಿನ ಅಡುಗೆಗೆ ಅಗತ್ಯವಾಗಿ ಬಳಸುವ ಟೊಮ್ಯಾಟೊ ಬೆಲೆಯೂ ಕೆಲ ದಿನಗಳಿಂದ 50 ರಿಂದ 70 ರೂ. ಆಗಿದ್ದು, 80ರ ಗಡಿ ದಾಟಿದೆ. ಸೊಪ್ಪುಗಳ ದರವೂ ಏರಿಕೆಯಾಗಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಫೆಬ್ರವರಿಯಿಂದಲೇ ಆರಂಭವಾದ ಬಿಸಿಲ ತಾಪಮಾನ ಮಾರ್ಚ್, ಏಪ್ರಿಲ್ನಲ್ಲಿ ತುತ್ತ ತುದಿಗೆ ತಲುಪಿತ್ತು. ಅಧಿಕ ತಾಪಮಾನ ಒಂದೆಡೆಯಾದರೆ, ಮತ್ತೊಂದೆಡೆ ಬರದ ಬೇಗೆಯಿಂದ ನೀರಿನ ಸಮಸ್ಯೆ ಎದುರಾಗಿ ತರಕಾರಿ ಬೆಲೆ ಹೆಚ್ಚಾಗಿತ್ತು. ಕಡಿಮೆ ಆಗುತ್ತಿದೆ ಎನ್ನುವಷ್ಟರಲ್ಲಿ ಮೇ ತಿಂಗಳ ಆರಂಭದಿಂದ ಸುರಿದ ಮಳೆಯಿಂದಾಗಿ ಕೆಲ ಬೆಳೆಗಳಿಗೆ ಹಾನಿ ಉಂಟಾಯಿತು. ಇದರಿಂದ ಬೀನ್ಸ್, ಹಸಿ ಮೆಣಸಿನಕಾಯಿ, ಹೀರೇಕಾಯಿ, ಚಪ್ಪರದವರೆ, ಸೊಪ್ಪಿನ ದರ ಪುನಃ ಹೆಚ್ಚಳವಾಯಿತು.

ದಿಢೀರ್ ಏರಿದ ಬಾಳೆ:
ಬೇಸಿಗೆಯಲ್ಲಿ ಬಾಳೆಹಣ್ಣುಗಳನ್ನು ಕೇಳುವವರೇ ಇರಲಿಲ್ಲ. ಕೆ.ಜಿ.ಗೆ 40-50 ರೂ. ಇದ್ದುದು ಇದೀಗ ಏಕಾಏಕಿ ಏಲಕ್ಕಿ ಬಾಳೆ 70-80 ರೂ.ಗೆ ಏರಿಕೆಯಾಗಿದೆ. ಮಳೆಯಿಂದಾಗಿ ಹಲವು ಕಡೆ ಬಾಳೆ ಬೆಳೆ ಹಾಳಾಗಿದೆ. ಜತೆಗೆ ಮದುವೆ, ಗೃಹ ಪ್ರವೇಶದಂತಹ ಕಾರ್ಯಕ್ರಮಗಳು ಹೆಚ್ಚಾಗಿರುವುದರಿಂದ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ, ಬೆಲೆ ಏರಿಕೆಯಾಗಿದೆ.

ನಾಟಿ ಕೊತ್ತಂಬರಿ ಸೊಪ್ಪು ಏರಿಕೆ:
ಮಳೆಯಿಂದ ಸೊಪ್ಪಿನ ಬೆಳೆಗಳು ಹಾಳಾಗಿದ್ದು, ದರ ಏರಿಕೆಯಾಗಿದೆ. ನಾಟಿ ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 15 ರೂ. ದರವಿದೆ. ಇನ್ನಿತರೆ ಸೊಪ್ಪಿನ ದರವೂ ಗಗನಕ್ಕೇರಿದ್ದು, ಅಧಿಕ ಬೆಲೆಗೆ ಮಾರಾಟವಾಗುತ್ತಿದೆ.

ಆಷಾಢದಲ್ಲಿ ಇಳಿಕೆ ಸಾಧ್ಯತೆ:
ಸದ್ಯ ಆಲೂಗಡ್ಡೆ ಹೊರತು ಪಡಿಸಿ ಯಾವ ತರಕಾರಿಯೂ 60 ರೂ.ಗಿಂತ ಕಡಿಮೆಯಿಲ್ಲ. ಕೆಲವು 150-180 ರೂ. ವರೆಗೆ ಏರಿಕೆಯಾಗಿವೆ. ಸೀಸನ್ ಅಲ್ಲದ ಕಾರಣ ಬಟಾಣಿ ದರ 200ರ ಗಡಿ ದಾಟಿದೆ. ಆಷಾಢದಲ್ಲಿ ಬೆಲೆಗಳು ಸ್ವಲ್ಪ ಇಳಿಕೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಬೆಲೆ ಏರಿಕೆ ಮುಂದುವರಿಯುತ್ತದೆ ಎನ್ನುತ್ತಾರೆ ಸಗಟು ವ್ಯಾಪಾರಸ್ಥರು.

ತರಕಾರಿ ದರ (ಕೆ.ಜಿ.ಗಳಲ್ಲಿ)
ಬೀನ್ಸ್ 140 ರೂ.
ನುಗ್ಗೆಕಾಯಿ 120 ರೂ.
ಬಜ್ಜಿ ಮೆಣಸಿನಕಾಯಿ 80 ರೂ.
ಕ್ಯಾಪ್ಸಿಕಾಂ 80 ರೂ.
ಹೀರೇಕಾಯಿ 60 ರೂ.
ಬಿಳಿ ಬದನೆ 60 ರೂ.
ಟೊಮ್ಯಾಟೊ 70 ರೂ.
ನವಿಲುಕೋಸು 120 ರೂ.
ಹಾಗಲಕಾಯಿ 80 ರೂ.
ಹಸಿಮೆಣಸಿನಕಾಯಿ 80 ರೂ.
ಕ್ಯಾರಟ್ ಊಟಿ 80 ರೂ.
ಮೂಲಂಗಿ 60 ರೂ.
ಬೆಂಡೆಕಾಯಿ 60 ರೂ.

ಹಣ್ಣಿನ ದರ (ಕೆ.ಜಿ.ಗಳಲ್ಲಿ)
ಸೇಬು 150ರಿಂದ 200 ರೂ.
ಮೋಸುಂಬಿ 80 ರೂ.
ಏಲಕ್ಕಿ ಬಾಳೆ 70 ರೂ.
ರಸಬಾಳೆ 45 ರೂ.
ದಾಕ್ಷಿ 120 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net