ಹಣ್ಣು, ತರಕಾರಿ ಬೆಳೆಯುವ ರೈತರಿಗೂ ಪ್ರೋತ್ಸಾಹಧನಕ್ಕೆ ಆಗ್ರಹ

Published on

ಮೈಸೂರು: ಕೆಎಂಎಫ್‌ನ ರೈತ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವಂತೆ ಹಣ್ಣು, ತರಕಾರಿ ಬೆಳೆಯುವ ರೈತರಿಗೂ ಪ್ರೋತ್ಸಾಹಧನ ನೀಡಬೇಕು ಎಂದು ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಮಿರ್ಲೆ ಅಣ್ಣೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 5 ರೂ.ಉತ್ತೇಜನ ನೀಡುತ್ತಿರುವುದು ಸಂತೋಷದ ವಿಷಯ. ಅಂತೆಯೇ ತೋಟಗಾರಿಕೆ ಬೆಳೆಗಾರರ ಹಿತದೃಷ್ಟಿಯಿಂದ 1996ರಂದು ಕರ್ನಾಟಕ ತೋಟಗಾರಿಕೆ ಮಹಾಮಂಡಳ (ಕೆಎಚ್‌ಎಫ್) ನಾಮಾಂಕಿತದಲ್ಲಿ ಸ್ಥಾಪಿತವಾಗಿರುವ ರಾಜ್ಯದ 29 ಜಿಲ್ಲೆಗಳಲ್ಲಿ ಇರುವ ಹಾಪ್‌ಕಾಮ್ಸ್ ತೋಟಗಾರಿಕೆ ಬೆಳೆಗಾರರಿಗೆ ಸಹಾಯಧನ ನೀಡಬೇಕು ಎಂದು ಹೇಳಿಕೆಯಲ್ಲಿ ಕೋರಿದ್ದಾರೆ.
ಹಣ್ಣು ಮತ್ತು ತರಕಾರಿಗಳು ಬೇಗ ನಾಶವಾಗುವ ಪದಾರ್ಥಗಳಾಗಿದ್ದು, ಪ್ರತಿದಿನ ಮಾರುಕಟ್ಟೆಯಲ್ಲಿ ದರಗಳು ಏರಿಳಿತವಾಗುವುದು ಸಾಮಾನ್ಯ. ಇದರಿಂದಾಗಿ ಅನ್ನದಾತರಿಗೆ ತಾವು ಬೆಳೆಯುವ ಪದಾರ್ಥದಿಂದ ದುಡಿಮೆಗೆ ತಕ್ಕ ಫಲ ಸಿಗುತ್ತಿಲ್ಲ. ಇದರಿಂದಾಗಿ ಸಣ್ಣ ಮತ್ತು ದೊಡ್ಡ ಹಿಡುವಳಿದಾರರಿಗೆ ಹಣ್ಣು ಮತ್ತು ತರಕಾರಿಗಳ ಬೆಳೆಯಿಂದ ಅತಿ ಹೆಚ್ಚು ನಷ್ಟ ಉಂಟಾಗುತ್ತಿದೆ. ಆದ್ದರಿಂದ ಕೆಎಂಎಫ್‌ನ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ನೀಡುವ ಉತ್ತೇಜನ ಹಣದಂತೆ, ತೋಟಗಾರಿಕೆ ಉತ್ಪನ್ನಗಳ ಬೆಳೆಗಾರರಿಗೆ ಸರ್ಕಾರದ ಕಾಳಜಿಯಿಂದ ಬಾಳೆಹಣ್ಣಿಗೆ ಕೆಜಿ ಒಂದಕ್ಕೆ 5 ರೂ., ಪ್ರತಿ ತರಕಾರಿಗೆ ಕೆಜಿ ಒಂದಕ್ಕೆ 3 ರೂ. ಉತ್ತೇಜನ ಹಣ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net