ಹಣಕ್ಕೆ ಕರೊನಾ ಲಸಿಕೆ ಮಾರಾಟ, ಮಹಿಳೆಯೊಬ್ಬರ ಆರೋಪ, ತಹಸೀಲ್ದಾರ್ ಕೆ. ಮಂಜುನಾಥ್ ಪರಿಶೀಲನೆ

nela
Published on

ನೆಲಮಂಗಲ: ನಗರದ ಅರಿಶಿಣಕುಂಟೆ ಆರೋಗ್ಯ ಉಪಕೇಂದ್ರದಲ್ಲಿ ಕೋವಿಡ್ ಲಸಿಕೆಗಾಗಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ. ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ಲಸಿಕಾ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು.

ಅರಿಶಿಣಕುಂಟೆಯ ಆರೋಗ್ಯ ಉಪಕೇಂದ್ರ ಆರೋಗ್ಯ ಕಿರಿಯ ಸಹಾಯಕಿಯೊಬ್ಬರು ನಾಲ್ಕೈದು ದಿನಗಳಿಂದ 400 ರೂ. ಪಡೆದು ಕೋವಿಶೀಲ್ಡ್ ಲಸಿಕೆ ನೀಡುತ್ತಿದ್ದಾರೆ ಎಂದು ಲಸಿಕೆ ಪಡೆದ ಮಹಿಳೆ ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರಿಂದ ಪರಿಶೀಲಿಸಿದರು.

80ಕ್ಕೂ ಹೆಚ್ಚು ಜನರಿಂದ ವಸೂಲಿ ಆರೋಪ: ತಾಲೂಕಿನಲ್ಲಿ ಲಸಿಕೆ ಕೊರತೆ ಇದೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿ ಲಸಿಕೆ ಲಭ್ಯವಾಗುವಂತೆ ಮಾಡುವುದೇ ತಾಪತ್ರಯವಾಗಿದೆ. ಹೀಗಿರುವಾಗ ನಾಲ್ಕೈದು ದಿನಗಳಿಂದ 80ಕ್ಕೂ ಹೆಚ್ಚು ಜನರಿಂದ ತಲಾ 400 ರೂ. ವಸೂಲಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಹಸೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು. ಪರಿಶೀಲನೆ ವೇಳೆ ಲಸಿಕೆ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಸಹಾಯಕಿಯ ಮನೆಯಲ್ಲಿದ್ದ ಕೋವಿಶೀಲ್ಡ್ ಚುಚ್ಚುಮದ್ದಿನ 2 ವಯಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಆತ್ಯಹತ್ಯೆ ಬೆದರಿಕೆ: ಲಸಿಕೆ ನೀಡುವಲ್ಲಿ ಅಕ್ರಮ ಎಸಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರು ವಿಚಾರಣೆ ನಡೆಸಿದ ಬಳಿಕ ಕೇಂದ್ರದಿಂದ ಹೊರಬಂದ ಕಿರಿಯ ಆರೋಗ್ಯ ಸಹಾಯಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು. ಬಳಿಕ ಮನವೊಲಿಸಿದ ಅಧಿಕಾರಿಗಳು ಚುಚ್ಚುಮದ್ದು ನೀಡಿದ ದಾಖಲೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ.

ನಗರದ ಠಾಣೆ ಎಸ್‌ಐ ಎನ್. ಸುರೇಶ್, ರಾಜಸ್ವ ನಿರೀಕ್ಷಕ ಎ.ರವಿಕುಮಾರ್, ಗ್ರಾಮಲೆಕ್ಕಾಧಿಕಾರಿ ರಘುಪತಿ ಮತ್ತಿತತರು ಉಪಸ್ಥಿತರಿದ್ದರು.

ಉಪಕೇಂದ್ರಕ್ಕೆ ಒಟ್ಟು 50 ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗಿತ್ತು. ಎಷ್ಟು ಜನರಿಗೆ, ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಪಡೆದು ತನಿಖೆ ನಡೆಸುವಂತೆ ತಾಲೂಕು ಆರೋಗ್ಯಾಧಿಕಾರಿ ಅವರಿಗೆ ಸೂಚಿಸಿದ್ದೇನೆ. ಈ ವಿಷಯವನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೆ. ಮಂಜುನಾಥ್, ತಹಸೀಲ್ದಾರ್ ಆರೋಗ್ಯ ಇಲಾಖೆಯಿಂದ ಭಾನುವಾರ ಅರಿಶಿಣಕುಂಟೆ ಆರೋಗ್ಯ ಉಪಕೇಂದ್ರಕ್ಕೆ 50 ಡೋಸ್ ಲಸಿಕೆ ಕೊಡಲಾಗಿತ್ತು. 80ಕ್ಕೂ ಹೆಚ್ಚು ಜನರಿಗೆ ಶೇ.50 ಲಸಿಕೆ ಕೊಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಧಿಕಾರಿಗಳ ಗಮನಕ್ಕೆ ತರದೆ ಒಂದು ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ಲಸಿಕೆ ಪೂರೈಕೆ ಮಾಡಲಾಗಿದೆ. ದಾಖಲೆ ಪತ್ರಗಳನ್ನು ಪರಿಶೀಲಿಸಲಾಗುವುದು. ಡಾ.ಹರೀಶ್, ತಾಲೂಕು ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net