

ವಿಜಯವಾಣಿ ಸುದ್ದಿಜಾಲ ಆನೇಕಲ್
ಶಾರ್ಟ್ ಸರ್ಕ್ಯೂಟ್‌ನಿಂದ ಸಲೂನ್‌ಗೆ ಬೆಂಕಿ ಹೊತ್ತ್ತಿಕೊಂಡಿತ್ತು ಎನ್ನಲಾಗಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಸ್ನೇಹಿತೆಯರಿಬ್ಬರ ನಡುವಿನ ಹಣಕಾಸಿನ ವಿಷಯವೇ ದುಷ್ಕೃತ್ಯಕ್ಕೆ ಕಾರಣ ಎಂಬ ಸತ್ಯ ಬಯಲಾಗಿದೆ.
ಸಿಸಿ ಕ್ಯಾಮರಾದಲ್ಲಿನ ದೃಶ್ಯಗಳು: ತಾಲೂಕಿನ ಚಂದಾಪುರದ ವಿಶ್ ್ಯಾಮಿಲಿ ಸಲೂನ್‌ಗೆ ಡಿಸೆಂಬರ್ 31ರ ರಾತ್ರಿ ಬೆಂಕಿ ಬಿದ್ದಿತ್ತು. ಅಂಗಡಿಯ ಮಾಲೀಕರು ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಸೂರ್ಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬಳಿಕ ಮಾಲೀಕರಾದ ಬೇಬಿರಾಣಿ, ಸಲೂನ್‌ನಲ್ಲಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ ಶಿವಕುಮಾರ್ ಹಾಗೂ ಆತನ ಸಹಚರರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ದೃಶ್ಯಗಳು ಸೆರೆಯಾಗಿದ್ದವು. ಪೊಲೀಸರು ಈ ಸುಳಿವು ಆಧರಿಸಿ ತನಿಖೆ ಆರಂಭಿಸಿದಾಗ ಅಸಲಿ ಕಾರಣ ಬಯಲಾಗಿದೆ.
ಬೇಬಿರಾಣಿ, ಸ್ನೇಹಿತೆ ಪುಷ್ಪಾ ಬಳಿ ತಮ್ಮನಿಗೆ 3 ಲಕ್ಷ ರೂ. ಸಾಲ ಕೊಡಿಸಿದ್ದಳು. ಹಲವು ವರ್ಷ ಕಳೆದರೂ ಸಾಲ ಮರು ಪಾವತಿಸಿರಲಿಲ್ಲ. ಹೀಗಾಗಿ ಪುಷ್ಪಾ ಡಿಸೆಂಬರ್‌ನಲ್ಲಿ ಬೇಬಿರಾಣಿ ತಾಯಿ ಬಳಿ ಕೇಳಿದ್ದು, ಆಗ ಬೇಬಿರಾಣಿ ಹಣ ಕೊಡಲು ಸಮಯ ಕೇಳಿದ್ದಳು. ಈ ವಿಚಾರವಾಗಿ ಸ್ನೇಹಿತೆಯರ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಪುಷ್ಪಾ ಮತ್ತು ಆಕೆಯ ಪ್ರಿಯಕರ ಸೇರಿ ಸಂಚು ರೂಪಿಸಿ ಸಲೂನ್ ಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಪುಷ್ಪಾ ತಲೆಮರೆಸಿಕೊಂಡಿದ್ದು, ಪ್ರಿಯಕರ ಆನೇಕಲ್ ನಿವಾಸಿ ಶಿವಕುಮಾರ್ ಹಾಗೂ ಆತನ ಸಹಚರರಾದ ತಮಿಳುನಾಡು ಮೂಲದ ಉಮೇಶ್, ಹರೀಶ್, ಮಣಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಹಣಕಾಸಿನ ವ್ಯವಹಾರಕ್ಕಾಗಿ ದ್ವೇಷವಿಟ್ಟುಕೊಂಡು ಸಲೂನ್‌ಗೆ ಬೆಂಕಿ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ.
ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ಗ್ರಾಮಾಂತರ ಎಸ್‌ಪಿ
ನನಗೂ ಪುಷ್ಪಾಗೂ ಹಣಕಾಸಿನ ವ್ಯವಹಾರವಿರಲಿಲ್ಲ. ನನ್ನ ತಮ್ಮನಿಗೆ ಹಣ ಕೊಡಿಸಿದ್ದೆ, ನನ್ನ ಏಳಿಗೆ ಸಹಿಸದೆ ಸಲೂನ್‌ಗೆ ಬೆಂಕಿ ಹಚ್ಚಿದ್ದಾರೆ.
ಬೇಬಿರಾಣಿ, ಸಲೂನ್ ಮಾಲಕಿ