ಹಣ ಹೊಂದಿಸಲಾಗದೆ ರೆಷನ್ ಕಾರ್ಡ್‌ಗಳ ರದ್ದು:ಶಾಸಕ ಸುನೀಲ್ ಕುಮಾರ್ ಆರೋಪ

11
Published on

 ಹಾಸನ: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಸಾಧ್ಯವಾಗದ ಕಾರಣ ಎಲ್ಲ ಕಡೆ ಪಡಿತರ ಕಾರ್ಡ್ ರದ್ದು ಮಾಡುತ್ತಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇರುವುದು ಶೂನ್ಯ ಅಭಿವೃದ್ಧಿಯ ಸರ್ಕಾರವಾಗಿದೆ. ಹಗರಣಗಳ ಭ್ರಷ್ಟ ಸರ್ಕಾರ. ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಗುರಿಯಾಗಿಸಿಕೊಂಡು ಎರಡು ತಿಂಗಳ ಅವಧಿಯಲ್ಲಿ 11 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಿದೆ. ಈ ಪ್ರಕ್ರಿಯೆ ನಿಂತಿಲ್ಲ. ಇನ್ನು ಮುಂದುವರೆದಿದೆ. ಸರ್ಕಾರ ಇಲ್ಲಿಯವರೆಗೆ ಯಾವ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಇದರಿಂದಾಗಿ ಬಡವರು ಕೇಂದ್ರ, ರಾಜ್ಯ ಸರ್ಕಾರ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಪ್ರಮುಖವಾಗಿ ಆಯುಷ್ಮಾನ್ ಭಾರತ್, ಗೃಹಲಕ್ಷ್ಮೀ ಅನೇಕ ಯೋಜನೆಗಳಿಂದ ಬಿಪಿಎಲ್ ಕುಟುಂಬವು ವಂಚಿತರಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ರೇಷನ್ ಕಾರ್ಡ್ ರದ್ದು ಮಾಡಿರುವುದು ಇತಿಹಾಸದಲ್ಲೇ ಇದೆ ಮೊದಲು. ರೇಷನ್ ಕಾರ್ಡ್ ರದ್ದು ಮಾಡಬಾರದು ಎಂದು ಆಗ್ರಹಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಸ್ತೂರಿ ರಂಗನ್ ವರದಿಗೆ ಸಂಬಂಧಪಟ್ಟಂತೆ ರಾಜ್ಯದ 17 ಜಿಲ್ಲೆಗಳು ಇದರ ವ್ಯಾಪ್ತಿಗೆ ಬರುತ್ತವೆ. ಅತಿ ಸೂಕ್ಷ್ಮ ವಲಯವಾದ ಸಕಲೇಶಪುರ, ಮೂಡಿಗೆರೆ ಕೂಡ ಸೇರುತ್ತಿದೆ. ಸರ್ಕಾರ ಇಲ್ಲಿಯವರೆಗೂ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಇದರಿಂದ ದೊಡ್ಡ ಪ್ರಮಾಣದಲ್ಲಿ ಜನಜೀವನಕ್ಕೆ ತೊಂದರೆ ಆಗುತ್ತಿದೆ. ಈ ವಿಚಾರವನ್ನು ಕೂಡ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದರು.

ದಿನದಿಂದ ದಿನಕ್ಕೆ ವಕ್ಫ್ ತನ್ನ ಆಸ್ತಿ ಹೆಚ್ಚಿಸಿಕೊಳ್ಳುತ್ತಿದೆ. ದೇವಾಲಯ, ಮಠ, ಪಾರ್ಕ್, ಶಾಲೆ, ಮನೆ, ತೋಟ ಇತರೆ ಎಲ್ಲವನ್ನೂ ವಕ್ಫ್ ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಕ್ಫ್ ತನ್ನ ಕದಂಬ ಬಾಹು ಚಾಚುತ್ತಿದೆ. ಇಷ್ಟಾದರೂ ಸರ್ಕಾರ ಮೌನ ವಹಿಸಿದೆ. ವಕ್ಫ್ ಪರವಾಗಿ ಸರ್ಕಾರ ವಕಾಲತ್ತು ವಹಿಸುತ್ತಿರುವುದು ಬೇಸರ ಮೂಡಿಸಿದೆ. ರಾಜ್ಯಾದ್ಯಂತ 75 ಜನರ ಮೂರು ತಂಡ ಪ್ರವಾಸ ಮಾಡಲು ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಉಪ ಚುನಾವಣೆ ಫಲಿತಾಂಶ ಬಂದ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ. ಮೂರು ಸ್ಥಾನವನ್ನು ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ಸೂಕ್ಷ್ಮ ಕಾಂಗ್ರೆಸ್‌ಗೆ ಗೊತ್ತಾಗಿರುವುದರಿಂದ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಆಗದೆ ನಮ್ಮ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ನಮ್ಮ ಹೆಗಲ ಮೇಲೆ ಗನ್ ಇಟ್ಟುಕೊಂಡು ಅವರ ಹೈಕಮಾಂಡಿಗೆ ಗುಂಡು ಹಾರಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹಣದ ಆಮಿಷ ಒಡ್ಡುವಂತಹ ದುಸ್ತಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಿಂದುಳಿದ ವರ್ಗ ಅಸ್ತ್ರ, ಅಹಿಂದ ಅಸ್ತ್ರ, ಹಣದ ಆಫರ್ ಅಸ್ತ್ರಗಳನ್ನು ಸಿದ್ದರಾಮಯ್ಯ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಾವು ಸರ್ಕಾರ ಬೀಳಿಸುವುದಕ್ಕೆ ಹೋಗುವುದಿಲ್ಲ ಎಂದರು.

ಕೋವಿಡ್ ಬಂದ 2020ರ ಆಸುಪಾಸಿನಲ್ಲಿ ಮಾಸ್ಕ್ ಸಮೇತ ಸಿಗುತ್ತಿರಲಿಲ್ಲ. ಸ್ವಸಹಾಯ ಸಂಘದ ಮೂಲಕ ಬಿಜೆಪಿ ಮೋರ್ಚಾ ಮಹಿಳೆಯರು ಮಾಸ್ಕ್ ಹೊಲೆದು ಕೊಟ್ಟಿದ್ದರಿಂದ ನಾವು ಜನರಿಗೆ ನೀಡಿದ್ದೇವೆ. ಸ್ಯಾನಿಟೈಸರ್ ಸಿಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚುವರಿ ಖರೀದಿಯನ್ನು ಕರ್ನಾಟಕ ಒಂದೆ ಅಲ್ಲ. ಜಗತ್ತಿನಲ್ಲಿನ ಎಲ್ಲ ರಾಷ್ಟ್ರಗಳು ಕೂಡ ಖರೀದಿ ಮಾಡಿದೆ. ಅಗತ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಖರೀದಿ ಮಾಡಲಾಗಿದೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ಎಸ್‌ಐಟಿ ತನಿಖೆಯಾಗಲಿ. ನಾವು ಯಾವ ತನಿಖೆಯನ್ನು ಕೂಡ ವಿರೋಧ ಮಾಡುತ್ತಿಲ್ಲ. ಆದರೆ ಕೋವಿಡ್ ಪರಿಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿ ಅಭದ್ರತೆ ಕಾಡುತ್ತಿರುವುದು ಬಿಜೆಪಿಯಿಂದಲ್ಲ. ಅವರ ಹೈಕಮಾಂಡ್‌ನಿಂದ ಮತ್ತು ಸಚಿವ ಸಂಪುಟದ ಸಹೊದ್ಯಿಗಿಗಳಿಂದ ಅಭದ್ರತೆ ಕಾಡುತ್ತಿದೆ. ಲೋಕಾಯುಕ್ತ ಮುಂದೆ ಮುಖ್ಯಮಂತ್ರಿ ಕೈ ಕಟ್ಟಿ ನಿಲ್ಲುತ್ತಾರೆ ಎಂದರೇ ಎಲ್ಲಿ ಸ್ವಾಭಿಮಾನ ಅನಿಸುತ್ತದೆ. ತನ್ನ ಇಡೀ ಕುಟುಂಬ ಸೈಟ್ ವಾಪಸ್ ಕೊಟ್ಟ ಮೇಲೆ ಸ್ವಾಭಿಮಾನ ಇದೆ ಅನಿಸುತ್ತಿದಿಯೇ? ಒಂದು ವರ್ಷದಲ್ಲಿ ಸಾಲು ಸಾಲು ಹಗರಣ ಬಂದರೂ ನನಗೆ ಏನು ಗೊತ್ತಿಲ್ಲ ಎಂದರೆ ಅದಕ್ಕೆ ಸ್ವಾಭಿಮಾನ ಎಂದು ಕರೆಯಬಹುದಾ! ಸ್ವಾಭಿಮಾನ ಎಂದರೆ ಏನು ಎಂಬುದನ್ನು ಅವರಿಗೆ ಕೇಳಬೇಕು ಎಂದು ಕುಟುಕಿದರು.

ಇದೆ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಮುಖಂಡರಾದ ರೇಣುಕುಮಾರ್, ಶೋಭನ್ ಬಾಬು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net